ಹೊಸದಿಗಂತ ವರದಿ ಗಂಗಾವತಿ:
ಪಾದಯಾತ್ರೆಯ ಜೊತೆಗೆ ಪ್ರತಿ ದಿನವೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಆರಂಭಿಸಿರುವ ಪಾದಯಾತ್ರೆಗೆ ಜನರು ಸಾಗರೋಪಾದಿಯಲ್ಲಿ ಹರಿದು ಬಂದರು. ಎಲ್ಲಾ ಕಡೆಯಿಂದಲೂ ಜನರು ಪಾದಯಾತ್ರೆಗೆ ಸೇರಿಕೊಂಡು ರಂಗೇರಿಸಿದರು.

ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ನಿರ್ಲಕ್ಷ್ಯವನ್ನು ಕುರಿತು ಹಾಡುಗಳು ಗಮನಸೆಳೆದವು. ಸ್ಕ್ಯಾಮ್ ಸರ್ಕಾರ ಇದು ಕಾಂಗ್ರೆಸ್ ಸರ್ಕಾರ, ಉದ್ದಾರ ಮಾಡ್ಕೊತ್ತಾರೆ ಅವರ ಸಂಸಾರ ಎಂಬ ಗೀತೆಗಳನ್ನು ಗುನುಗುನಿಸುತ್ತಾ ಜನರು ಹೆಜ್ಜೆ ಹಾಕಿದರು. ಹಾಡಿನ ಜತೆಗೆ ಡೊಳ್ಳು ಬಾರಿಸುತ್ತಾ, ನೃತ್ಯ ಮಾಡುತ್ತಾ, ಶಿಳ್ಳೆ ಹಾಕುತ್ತಾ ಜನರು ಬೆಂಬಲ ಸೂಚಿಸಿದರು. ವಿವಿಧ ವೇಷಧಾರಿಗಳು ಗಮನ ಸೆಳೆದರು.

ಕಾಂಗ್ರೆಸ್ ಸರ್ಕಾರ ಮಾಡಿರುವ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ, ಹಿಂದೂ ಕಾರ್ಯಕರ್ತರ ಹತ್ಯೆ, ಬಿಡದಿ ಟೌನ್ಶಿಪ್ ಮತ್ತಿತರ ವಿಷಯಗಳ ಹಾಡುಗಳು ಪ್ರತಿಧ್ವನಿಸುತ್ತಿವೆ. ಇನ್ನು ಉಳುವ ಯೋಗಿಯ ನೋಡಲ್ಲಿ ಹಾಡುಗಳು ಪಾದಯಾತ್ರೆಯಲ್ಲಿ ಸಾಗುವವರಿಗೆ ಶಕ್ತಿ ನೀಡಿದವು. ಕೆಲವು ಸರ್ಕಲ್ಗಳಲ್ಲಿ ಪಟಾಕಿ ಸಿಡಿಸಲಾಯಿತು.
ರಾರಾಜಿಸುತ್ತಿವೆ ಬ್ಯಾನರ್ಗಳು, ಕಟೌಟ್ಗಳು:

ಆರನೇ ದಿನದ ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಪಾದಯಾತ್ರೆಗೆ ಶುಭ ಕೋರಿದ ಬ್ಯಾನರ್ಗಳು, ಕಟೌಟ್ಗಳು ರಾರಾಜಿಸಿದವು. ಮಾರ್ಗದುದ್ದಕ್ಕೂ ಸ್ವಾಗತ ಕೋರುವ ಬ್ಯಾನರ್ಗಳನ್ನು ಹಾಕಲಾಗಿದೆ. ಪಕ್ಷದ ಅಭಿಮಾನಿಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಜನರು ಸ್ವಯಂಪ್ರೇರಿತರಾಗಿ, ಈ ಪಾದಯಾತ್ರೆ ತಮ್ಮದು ಎಂಬ ಭಾವದಲ್ಲಿ ಬ್ಯಾನರ್ಗಳನ್ನು ಹಾಕಿಸಿದ್ದಾರೆ. ಆಕಾಶದಿಂದ ದಿಟ್ಟಿಸಿದರೆ ಇಡೀ ಪಾದಯಾತ್ರೆಯ ಮಾರ್ಗವೇ ಕೇಸರಿಮಯವಾಗಿ ಕಾಣುತ್ತಿದೆ.

ಪಾದಯಾತ್ರೆಗೆ ಹೆಜ್ಜೆ ಹಾಕಿದ ಮಹಿಳೆಯರು
ಆರನೇ ದಿನದ ಪಾದಯಾತ್ರೆಯಲ್ಲಿ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಪಾದಯಾತ್ರೆಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಕೇಸರಿ ಸೀರೆ, ಕೇಸರಿ ಕ್ಯಾಪ್ ಧರಿಸಿ ಪಾದಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಪಾದಯಾತ್ರೆ ಜನಾಂದೋಲನವಾಗಿ ಪರಿವರ್ತನೆಯಾಗುವಲ್ಲಿ ಎಲ್ಲರ ಕೊಡುಗೆಯೂ ಸೇರುತ್ತಿದೆ.



