ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಹೊಸದಾಗಿ ನಿರ್ಮಾಣಗೊಂಡಿರುವ ದೇವಾಲಯವೊಂದರಲ್ಲಿ ಲೈಟಿಂಗ್ ವ್ಯವಸ್ಥೆ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಜವರಾಯನ ಅಟ್ಟಹಾಸಕ್ಕೆ ಇಬ್ಬರು ಬಲಿ
ಮೃತರನ್ನು ಚೇತನ್ (27) ಮತ್ತು ಸಂತೋಷ್ (35) ಎಂದು ಗುರುತಿಸಲಾಗಿದೆ. ಶಿಡ್ಲಘಟ್ಟದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಇವರಿಬ್ಬರು ವಿದ್ಯುತ್ ದೀಪಾಲಂಕಾರ ಮಾಡುವ ಕೆಲಸದಲ್ಲಿ ನಿರತರಾಗಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಸೀರಿಯಲ್ ಸೆಟ್‌ನ ವೈರ್ ಒಂದು ಹರಿದು ಅಲ್ಲೇ ಇದ್ದ ಜನರೇಟರ್ ಮೇಲೆ ಬಿದ್ದಿದೆ. ಇದರಿಂದಾಗಿ ಇಡೀ ಜನರೇಟರ್ ತುಂಬೆಲ್ಲಾ ವಿದ್ಯುತ್ ಪ್ರವಹಿಸಿದೆ. ಇದರ ಅರಿವಿಲ್ಲದ ಚೇತನ್ ಮತ್ತು ಸಂತೋಷ್, ಜನರೇಟರ್ ಅನ್ನು ದೇವಾಲಯದ ಆವರಣದೊಳಗೆ ತಳ್ಳಲು ಹೋದಾಗ ಕರೆಂಟ್ ಶಾಕ್ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:
ಸ್ಥಳಕ್ಕೆ ಪೊಲೀಸರ ಭೇಟಿ, ಪರೀಶಿಲನೆ
ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ದೇವಸ್ಥಾನದ ಮಂಡಳಿಯವರು ಧಾವಿಸಿದರಾದರೂ ಇಬ್ಬರನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶಿಡ್ಲಘಟ್ಟದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಈ ಘಟನಾ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ದೇವಸ್ಥಾನದ ಆವರಣದಲ್ಲಿನ ಈ ಸಾವು ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ.



