September 6, 2026
Sunday, September 6, 2026
spot_img

‘ಬಳ್ಳಾರಿ ಚಲೋ’ 6ನೇ ದಿನಕ್ಕೆ ಭರ್ಜರಿ ರೆಸ್ಪಾನ್ಸ್: ಕಂಪ್ಲಿಯಲ್ಲಿ ವಿಜಯೇಂದ್ರಗೆ ಭರ್ಜರಿ ಸ್ವಾಗತ

ಹೊಸದಿಗಂತ ವರದಿ ಬಳ್ಳಾರಿ:

ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ, ರೈತರ ಸಮಸ್ಯೆಗಳಿಗೆ ದನಿಯಾಗಬೇಕು, ವಾಲ್ಮೀಕಿ ನಿಗಮದ ಹಣ ನಿಗಮಕ್ಕೆ ವಾಪಸ್ಸಾಗಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಕಮಲ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಕೈಗೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆಯ 6ನೇ ದಿನ ಕಂಪ್ಲಿ ಪಟ್ಟಣ ತಲುಪಿದ್ದು ಅಲ್ಲಿಗೆ ಜನಸಾಗರವೇ ಹರಿದು ಬಂತು.

ಪಾದಯಾತ್ರೆಯ ಮಧ್ಯೆ ಊಟದ ವಿರಾಮದಲ್ಲಿ ಕಂಪ್ಲಿ ತಾಲೂಕಿನ ವಿನೋಬನಗರದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರೊಂದಿಗೆ ವಿಜಯೇಂದ್ರ ಅವರು ಆತ್ಮೀಯ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಕೇಳಿದ ವಿವಿಧ ಪ್ರಶ್ನೆಗಳಿಗೆ ಸಂಯಮದಿಂದ ಉತ್ತರಿಸಿದ ಅವರು, ಅವರ ಕನಸುಗಳು, ಆಕಾಂಕ್ಷೆಗಳು ಹಾಗೂ ಭವಿಷ್ಯದ ಕುರಿತಾಗಿ ಚರ್ಚಿಸಿದರು. “ಯುವಜನತೆಯ ಪ್ರತಿಭೆ, ಕೌಶಲ್ಯ, ಉತ್ಸಾಹ ಹಾಗೂ ಸೃಜನಶೀಲತೆಯೇ ವಿಕಸಿತ ಭಾರತದ ನೈಜ ಶಕ್ತಿ. ಆದರೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಶಾಲಾ-ಕಾಲೇಜುಗಳಲ್ಲಿ ಮೂಲಸೌಕರ್ಯ ಕೊರತೆ, ಶಿಕ್ಷಕರ ಹುದ್ದೆಗಳು ಖಾಲಿ, ನಿರುದ್ಯೋಗ ಹಾಗೂ ಪರೀಕ್ಷಾ ಅಕ್ರಮಗಳಿಂದ ಯುವಪೀಳಿಗೆ ಅನಿಶ್ಚಿತತೆ ಎದುರಿಸುತ್ತಿದೆ” ಎಂದು ವಿಜಯೇಂದ್ರ ಹೇಳಿದರು.

ರಸ್ತೆ ಗುಂಡಿ ಸ್ವತಃ ಮುಚ್ಚಿ ಗಮನಸೆಳೆದ ವಿಜಯೇಂದ್ರ:

ವಿನೋಬನಗರದಲ್ಲಿ ಪಾದಯಾತ್ರೆ ಸಾಗುತ್ತಿದ್ದ ವೇಳೆ ರಸ್ತೆಯಲ್ಲಿ ಬಿದ್ದಿದ್ದ ತಗ್ಗು ಗುಂಡಿಗಳನ್ನು ಗಮನಿಸಿದ ವಿಜಯೇಂದ್ರ ಅವರು, ಸ್ವತಃ ಗುಂಡಿ ಮುಚ್ಚುವ ಮೂಲಕ ಸ್ಥಳೀಯ ಸಮಸ್ಯೆಯತ್ತ ಗಮನ ಸೆಳೆದರು. ಈ ವೇಳೆ ಶ್ರೀರಾಮುಲು ಅವರು ಪುಟ್ಟಿಯ ಮೂಲಕ ಗುಂಡಿಗಳನ್ನು ಮುಚ್ಚಿದರು. ಸಾವಿರಾರು ಜನರ ಮಧ್ಯೆ ಸಾಗುವ ಪಾದಯಾತ್ರೆ ಕೇವಲ ರಾಜಕೀಯ ಕಾರ್ಯಕ್ರಮವಲ್ಲ, ಜನರ ನೈಜ ಸಮಸ್ಯೆಗಳನ್ನು ಅರಿಯುವ ಅಭಿಯಾನ ಎಂಬ ಸಂದೇಶವನ್ನು ಸಾರಿತು.

ತುಂಗಭದ್ರಾ ನದಿಗೆ ಪೂಜೆ:

ಕಂಪ್ಲಿ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಲಕ್ಷಾಂತರ ರೈತರ ಜೀವನಾಡಿಯಾಗಿರುವ ತುಂಗಭದ್ರಾ ನದಿಗೆ ವಿಜಯೇಂದ್ರ ಅವರು ಪೂಜೆ ಸಲ್ಲಿಸಿದರು. ನದಿ ನೀರು ರೈತರಿಗೆ ಹಾಗೂ ಜನರಿಗೆ ಸಮೃದ್ಧಿ ನೀಡಲಿ ಎಂದು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ತುಂಗಭದ್ರಾ ನದಿಗೆ ಪೂಜೆ ಸಲ್ಲಿಸಿದ ಬಳಿಕ ‘ಬಳ್ಳಾರಿ ಚಲೋ’ ಪಾದಯಾತ್ರೆ ಬಳ್ಳಾರಿ ಜಿಲ್ಲೆಗೆ ಪ್ರವೇಶಿಸಿತು. ಕುರಿಗಾಯಿಗಳ ಬದುಕಿನೊಂದಿಗೆ ಬೆರೆತು ದಿನ ಆರಂಭಿಸಿ, ವಿದ್ಯಾರ್ಥಿಗಳ ಭವಿಷ್ಯದ ಕುರಿತು ಸಂವಾದ ನಡೆಸಿ, ಸ್ಥಳೀಯ ಮೂಲಸೌಕರ್ಯದ ಸಮಸ್ಯೆಯನ್ನು ಸ್ವತಃ ಪರಿಹರಿಸುವ ಪ್ರಯತ್ನ ಮಾಡಿ, ತುಂಗಭದ್ರೆಗೆ ಪೂಜೆ ಸಲ್ಲಿಸಿ ಬಳ್ಳಾರಿ ಜಿಲ್ಲೆಗೆ ಪ್ರವೇಶಿಸುವ ಮೂಲಕ ಆರನೇ ದಿನದ ‘ಬಳ್ಳಾರಿ ಚಲೋ’ ಪಾದಯಾತ್ರೆ ಜನರ ಬದುಕು, ಯುವಜನರ ಭವಿಷ್ಯ ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳೊಂದಿಗೆ ಬೆಸೆದುಕೊಂಡ ದಿನವಾಗಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !