September 7, 2026
Monday, September 7, 2026
spot_img

ದೆಹಲಿಯ ಸತ್ಯನಿಕೇತನ ಪಿಜಿ ಕಟ್ಟಡ ಕುಸಿತ: ಸಾವಿನ ಸಂಖ್ಯೆ ಏಳಕ್ಕೆ ಏರಿಕೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿಯ ಸತ್ಯನಿಕೇತನ ಪಿಜಿ ಕಟ್ಟಡ ಕುಸಿತ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅವಶೇಷಗಳಡಿ ಇನ್ನೂ ಹಲವಾರು ಜನರು ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ, ದೆಹಲಿ ಅಗ್ನಿಶಾಮಕ ಸೇವೆ, ಪೊಲೀಸರು ಹಾಗೂ ರಕ್ಷಣಾ ತಂಡಗಳಿಂದ ನಿರಂತರವಾಗಿ ಶೋಧಕಾರ್ಯ ಮುಂದುವರಿದೆ. ಇನ್ನು ಕಟ್ಟಡದ ಮಾಲೀಕರಿಗಾಗಿ ಲುಕ್‌ಔಟ್‌ ಜಾರಿ ಮಾಡಲಾಗಿದೆ.

ಅವಶೇಷಗಳಡಿ ಮತ್ತೊಂದು ಮೃತದೇಹ

ಟನ್‌ಗಳಷ್ಟು ಕಾಂಕ್ರೀಟ್‌ ಅವಶೇಷಗಳ ಅಡಿಯಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಇನ್ನೂ ಸಾಕಷ್ಟು ಅವಶೇಷಗಳನ್ನು ತೆಗೆಯುವ ಕೆಲಸ ಬಾಕಿ ಇದೆ. ಸದ್ಯ ಏಳು ಮಂದಿಯ ಮೃತದೇಹ ಪತ್ತೆಯಾಗಿದೆ. ಗಾಯಗೊಂಡಿದ್ದ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಗಾಯಗೊಂಡವರನ್ನು ದಾಖಲಿಸಿದ್ದು, ಈಗಾಗಲೇ ಇಬ್ಬರನ್ನು ಡಿಸ್ಚಾರ್ಜ್‌ ಮಾಡಲಾಗಿದೆ. ಕಟ್ಟಡ ಕಟ್ಟುವ ಸಮಯದಿಂದ ಮಾಡಿರುವ ಹಲವು ಎಡವಟ್ಟುಗಳೇ ಕಟ್ಟಡ ಕುಸಿತಕ್ಕೆ ಕಾರಣ ಎಂದು ದೆಹಲಿ ಮೇಯರ್‌ ಪ್ರವೇಶ್‌ ವಾಹಿ ಮಾಹಿತಿ ನೀಡಿದ್ದಾರೆ. ಇನ್ನೂ ಹಲವು ವಿದ್ಯಾರ್ಥಿಗಳು ಒಳಗೆ ಸಿಲುಕಿರುವ ಸಾಧ್ಯತೆ ಇದೆ. ಆದರೆ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ದೆಹಲಿ ಸಚಿವ ಮಂಜಿದರ್‌ ಸಿಂಗ್‌ ಸಿರ್ಸಾ ಹೇಳಿದ್ದಾರೆ.

ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದೇನು?

ಪುರಸಭೆಯ ಸಹಕಾರದೊಂದಿದೆ, ಸಾರ್ವಜನಿಕ ಬಳಕೆಗೆ ನಿರ್ಮಿಸಿದ ಯಾವುದೇ ಕಟ್ಟಡಗಳು ಕೆಲವೊಂದು ಸುರಕ್ಷತಾ ದೃಢೀಕರಣವನ್ನು ಪಡೆದಿರಬೇಕು. ಆಸ್ಪತ್ರೆ, ಶಾಲೆ,ಪಿಜಿ ಇನ್ನಿತರ ಕಟ್ಟಡಗಳಿಗೆ ನೀಡುವ ಲೈಸೆನ್ಸ್‌ ಮಾಮೂಲಿ ಮನೆಗಳಿಗೆ ನೀಡುವ ಲೈಸೆನ್ಸ್‌ ಬೇರೆ ಇದೆ. ಸುರಕ್ಷತಾ ದೃಢೀಕರಣ ಪತ್ರ ಇಲ್ಲದಿದ್ದಲ್ಲಿ ಅಂತಹ ಜಾಗವನ್ನು ಸಾರ್ವಜನಿಕರಿಗೆ ಬಳಸಲು ನೀಡುವಂತಿಲ್ಲ ಎಂದು ದೆಹಲಿ ಸಿಎಂ ರೇಖಾ ಗುಪ್ತಾ ಹೇಳಿದ್ದಾರೆ. ಕಟ್ಟಡ ದುರಂತದಿಂದ ಮನಸ್ಸಿಗೆ ನೋವಾಗಿದೆ. ಮೃತರ ಹಾಗೂ ಗಾಯಗೊಂಡವರ ಪೋಷಕರ ಜೊತೆ ಸಂಪರ್ಕದಲ್ಲಿದ್ದೇವೆ. ಈ ಪರಿಸ್ಥಿತಿಗೆ ಕಾರಣವಾದ ಮಾಲೀಕ, ಕಟ್ಟಡ ಕಟ್ಟಲು ಪರ್ಮಿಷನ್‌ ಕೊಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಘಟನೆ ಹಿನ್ನೆಲೆ

ಇದು ಸೌತ್ ಕ್ಯಾಂಪಸ್‌ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪ್ರಮುಖ ವಸತಿ ಗೃಹವಾಗೊದ್ದು, ಬಹುತೇಕ ವಿದ್ಯಾರ್ಥಿಗಳೇ ಇದ್ದರು ಎನ್ನಲಾಗಿದೆ. ಸುಮಾರು 30 ವರ್ಷ ಹಳೆಯದಾದ ಈ ಐದು ಅಂತಸ್ತಿನ ಕಟ್ಟಡಗಳಲ್ಲಿ 15 ಕೊಠಡಿಗಳಿವೆ. ಪ್ರತೀ ಕೊಠಡಿಯಲ್ಲಿಯೂ ಮೂವರು ವಿದ್ಯಾರ್ಥಿಗಳು ಇದ್ದರು ಎಂದು ಹೇಳಲಾಗಿದೆ. ಪ್ರತೀ ವಿದ್ಯಾರ್ಥಿಯಿಂದ 12 ಸಾವಿರ ರೂಪಾಯಿ ಬಾಡಿಗೆ ಪಡೆಯಲಾಗಿತ್ತು ಎಂದು ತಿಳಿದುಬಂದಿದೆ. ಕೇರಳ, ಹರಿಯಾಣ, ಉತ್ತರ ಪ್ರದೇಶ ಹಾಗೂ ಇನ್ನಿತರ ರಾಜ್ಯಗಳಿಂದ ದೆಹಲಿ ವಿಶ್ವವಿದ್ಯಾಲಯದ ಮೋತಿಲಾಲ್‌ ನೆಹರು ಕಾಲೇಜು, ಆತ್ಮಾರಾಮ ಸನಾತನ ಧರ್ಮ ಕಾಲೇಜು ಹಾಗೂ ಶ್ರೀ ವೆಂಕಟೇಶ್ವರ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಈ ಪಿಜಿಯಲ್ಲಿ ನೆಲೆಸಿದ್ದರು. ಮನೆಯ ಮಾಲೀಕರು ಕಟ್ಟಡಕ್ಕೆ ಪಿಜಿ ಎಂಬ ಫಲಕ ಹಾಕಿ ಬಾಡಿಗೆ ಪಡೆಯುತ್ತಿದ್ದಾರೆ. ಓನರ್‌ ಒಂದು ದಿನಕ್ಕೂ ಕಟ್ಟಡದ ಬಳಿ ಬಂದಿಲ್ಲ. ಪ್ರತೀ ತಿಂಗಳು ಫೋನ್‌ನಲ್ಲಿ ಹಣ ಕಳಿಸುವಂತೆ ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಕೆಲವು ಕಟ್ಟಡಗಳ ಬ್ಲೂಪ್ರಿಂಟ್‌ಗಳಲ್ಲಿ ದೋಷವಿದೆ. ಕಟ್ಟಡ ಕಟ್ಟುವ ಮುನ್ನ ಇರುವ ಬ್ಲೂ ಪ್ರಿಂಟ್‌ಗೂ ಕಟ್ಟಿರುವ ಕಟ್ಟಡಕ್ಕೂ ಸಂಬಂಧವೇ ಇಲ್ಲದಂತಿದೆ. ಮೊದಲು ಎರಡು ಫ್ಲೋರ್‌ ಎಂದು ಹೇಳಿ ಪರ್ಮಿಷನ್‌ ತೆಗೆದುಕೊಂಡು ನಂತರ ಐದಾರು ಫ್ಲೋರ್‌ ಅವೈಜ್ಞಾನಿಕವಾಗಿ ಕಟ್ಟಿದ್ದಾರೆ. ಎಲ್ಲವೂ ಕಳಪೆ ಕ್ವಾಲಿಟಿಯ ಮಟೀರಿಯಲ್‌ ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !