October 12, 2026
Monday, October 12, 2026
spot_img

ಭಾರತ-ಫ್ರಾನ್ಸ್‌ ಸಂಬಂಧದಲ್ಲಿ ಹೊಸ ಮೈಲುಗಲ್ಲು: ಪ್ಯಾರಿಸ್‌ನಲ್ಲಿ ಸ್ವಾಮಿನಾರಾಯಣ ದೇಗುಲ ಉದ್ಘಾಟಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ಯಾರಿಸ್‌ನಲ್ಲಿ ಸ್ವಾಮಿನಾರಾಯಣ ದೇಗುಲವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದು, ಭಾರತ ಹಾಗೂ ಫ್ರಾನ್ಸ್‌ ಸಂಬಂಧದಲ್ಲಿ ಇದೊಂದು ಹೊಸ ಮೈಲುಗಲ್ಲಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಈ ಎರಡೂ ದೇಶಗಳ ಸಂಬಂಧ ಹೊಸ ಎತ್ತರಕ್ಕೆ ತಲುಪಲಿದೆ. ಕಾರ್ಯತಂತ್ರದ ಪಾಲುದಾರಿಕೆಯು ಅತ್ಯಂತ ವಿಶೇಷವಾಗಿದ್ದು, ಅದು ದೀರ್ಘಕಾಲದ ಸಾಂಸ್ಕೃತಿಕ ಮತ್ತು ರಾಜಕೀಯ ಸಂಬಂಧಗಳ ಘನ ಅಡಿಪಾಯದ ಮೇಲೆ ನಿಂತಿದೆ ಎಂದಿದ್ದಾರೆ.

ಪ್ಯಾರಿಸ್‌ನಲ್ಲಿ ನಿರ್ಮಾಣವಾದ ಸ್ವಾಮಿನಾರಾಯಣ ದೇಗುಲವನ್ನು ವರ್ಚ್ಯುಯಲ್‌ ಆಗಿ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ ಈ ಭವ್ಯ ದೇವಾಲಯ ಶತಮಾಗಳ ಕಾಲ ಇರಲಿದೆ ಎಂದು ಹೇಳಿದ್ದಾರೆ. ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ರಕ್ಷಣೆಯಿಂದ ಬಾಹ್ಯಾಕಾಶ ಮತ್ತು ಹವಾಮಾನ ಕ್ರಿಯೆಯವರೆಗೆ, ಭಾರತ ಮತ್ತು ಫ್ರಾನ್ಸ್ ಹೊಸ ಆವೇಗ ಮತ್ತು ಶಕ್ತಿಯೊಂದಿಗೆ ಒಟ್ಟಾಗಿ ಮುಂದುವರೆಯುತ್ತಿವೆ. ನಾವು 2026ನ್ನು ಭಾರತ-ಫ್ರಾನ್ಸ್ ನಾವೀನ್ಯತೆಯ ವರ್ಷವನ್ನಾಗಿಯೂ ಆಚರಿಸುತ್ತಿದ್ದೇವೆ. ಎರಡೂ ದೇಶಗಳ ನಡುವಿನ ಜಂಟಿ ಉದ್ಯಮದ ಸಾಧ್ಯತೆಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಫ್ರಾನ್ಸ್‌ನಲ್ಲಿ ಭಾರತೀಯ ಸೈನಿಕರ ತ್ಯಾಗ ಇಂದಿಗೂ ಜನರ ಹೃದಯದಲ್ಲಿ ಜೀವಂತವಾಗಿದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ ಎಂದು ಪ್ರಧಾನಿ ತಿಳಿಸಿದರು.

ಸಂಸ್ಕೃತವನ್ನು ಜನಪ್ರಿಯಗೊಳಿಸುವಲ್ಲಿ ಫ್ರೆಂಚ್ ವಿದ್ವಾಂಸರು ವಹಿಸಿದ ಪ್ರಮುಖ ಪಾತ್ರವು ಭಾಷಾಭಿಮಾನಿಗಳಿಗೆ ಗೊತ್ತಿದೆ. ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಕುರಿತು ರೊಮೈನ್ ರೋಲ್ಯಾಂಡ್ ಅವರ ಬರಹಗಳು ನಮ್ಮ ಸಮಾಜಗಳನ್ನು ಹತ್ತಿರಕ್ಕೆ ತಂದವು. ಅಲ್ಲದೆ, ಪ್ಯಾರಿಸ್‌ನಿಂದ ಪುದುಚೇರಿಯ ಶ್ರೀ ಅರಬಿಂದೋ ಆಶ್ರಮಕ್ಕೆ ‘ದಿ ಮದರ್’ ಅವರ ಆಧ್ಯಾತ್ಮಿಕ ಪ್ರಯಾಣವು ಅಸಂಖ್ಯಾತ ಭಾರತೀಯ ಮತ್ತು ಫ್ರೆಂಚ್ ಅನ್ವೇಷಕರಿಗೆ ಸ್ಫೂರ್ತಿ ನೀಡಿದೆ ಎಂದು ಪ್ರಧಾನಿ ಸ್ಮರಿಸಿದರು.

Must Read