ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮಗಿಂದು ಮಳೆ ನೀರೆಂಬ ಅಮೃತ ಜಲದ ಬಗ್ಗೆ ಯಾವುದೇ ಜ್ಞಾನ ಇಲ್ಲದಂತಾಗಿದೆ. ಮಳೆನೀರು ಅಮೂಲ್ಯ ಸಂಪನ್ಮೂಲವಾಗಿದ್ದು, ಅದನ್ನು ವ್ಯರ್ಥವಾಗಿ ಚರಂಡಿಗೆ ಹರಿದುಹೋಗಲು ಬಿಡದೆ ಸಮರ್ಪಕವಾಗಿ ಸಂಗ್ರಹಿಸಿ ಬಳಸಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಸೋಮವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ಮನುಷ್ಯನ ದಣಿವು, ಆಯಾಸ ಹಾಗೂ ಗಾಬರಿಯನ್ನು ನಿವಾರಿಸಿ ಸಮಾಧಾನ ನೀಡುವ ಶಕ್ತಿ ನೀರಿಗಿದೆ ಎಂದರು. ಮಳೆನೀರಿನಲ್ಲಿ ಅಪರಿಮಿತ ಚೈತನ್ಯವಿದ್ದು, ಹಲವು ವಿಶಿಷ್ಟ ಗುಣಗಳನ್ನು ಹೊಂದಿದೆ ಎಂದು ಆಯುರ್ವೇದ ಆಚಾರ್ಯರು ಹೇಳಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಹಿಂದಿನ ಕಾಲದಲ್ಲಿ ರಾಜರು ಮಳೆನೀರನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ಕುಡಿಯುತ್ತಿದ್ದರು. ಸಮರ್ಪಕವಾಗಿ ಸಂಗ್ರಹಿಸಿದ ಮಳೆನೀರು ದೀರ್ಘಕಾಲದವರೆಗೆ ಹಾಳಾಗದೆ ಸೇವನೆಗೆ ಯೋಗ್ಯವಾಗಿರುತ್ತದೆ. ಆದರೆ ಇಂದು ಮಳೆನೀರಿನ ಮಹತ್ವವನ್ನು ಅರಿಯದೆ ಅದನ್ನು ಚರಂಡಿಗೆ ಹರಿಯಲು ಬಿಡುತ್ತಿರುವುದು ವಿಷಾದಕರ ಎಂದು ಅವರು ಹೇಳಿದರು.

ಆಯುರ್ವೇದದಲ್ಲಿ ಮಳೆನೀರನ್ನು ತಂಪು, ಶುದ್ಧ, ರುಚಿಕರ, ಕಲ್ಮಶರಹಿತ, ಮಂಗಳಕರ ಹಾಗೂ ಜೀರ್ಣಕ್ಕೆ ಲಘು ಎಂದು ವಿವರಿಸಲಾಗಿದೆ. ಮಳೆನೀರನ್ನು ‘ಗಾಂಗ’ ಮತ್ತು ‘ಸಾಮುದ್ರ’ ಎಂದು ಎರಡು ವಿಧವಾಗಿ ವಿಂಗಡಿಸಲಾಗಿದ್ದು, ಸಂಗ್ರಹಿಸಿದ ಮಳೆಯ ನೀರು ಗಾಂಗವೋ? ಅಥವಾ ಸಾಮುದ್ರಕವೋ? ಎಂದು ತಿಳಿಯಲು ಅನೇಕ ಸುಲಭ ಪರೀಕ್ಷೆಗಳನ್ನು ಮಾಡಬಹುದಾಗಿದ್ದು, ಸಾಮಾನ್ಯವಾಗಿ ಆಶ್ವಯುಜ ಮಾಸದಲ್ಲಿ ಹಾಗೂ ದಕ್ಷಿಣ ದಿಕ್ಕಿನಲ್ಲಿ ಅಗಸ್ತ್ಯ ನಕ್ಷತ್ರ ಕಾಣುವಾಗ ಬೀಳುವ ಮಳೆಯ ನೀರು ಗಾಂಗವಾಗಿದ್ದು, ಅದು ಕುಡಿಯಲು ಉತ್ತಮೋತ್ತಮ ಎಂದು ಪ್ರಾಚೀನ ಮಹರ್ಷಿಗಳು ಸೂಚಿಸಿದ್ದಾರೆ ಎಂದು ಶ್ರೀಗಳು ಇದೇ ವೇಳೆ ವಿವರಿಸಿದರು.
ಮಳೆನೀರು ಯಾವ ರೀತಿಯ ಮಣ್ಣಿನ ಮೇಲೆ ಬೀಳುತ್ತದೆ ಎಂಬುದರ ಆಧಾರದ ಮೇಲೂ ಅದರ ರುಚಿ ಮತ್ತು ಗುಣದಲ್ಲಿ ಬದಲಾವಣೆ ಉಂಟಾಗುತ್ತದೆ. ಹೀಗಾಗಿ ಮಳೆನೀರನ್ನು ಬಂಗಾರ, ಬೆಳ್ಳಿ, ಮಣ್ಣಿನ ಅಥವಾ ಗಾಜಿನ ಪಾತ್ರೆಗಳಲ್ಲಿ ಸಂಗ್ರಹಿಸುವುದು ಸೂಕ್ತ ಎಂದು ಪೂರ್ವಜರು ತಿಳಿಸಿದ್ದರು ಎಂದು ರಾಘವೇಶ್ವರ ಶ್ರೀ ವಿವರಿಸಿದರು.

ಮಳೆನೀರಿನ ಮಹತ್ವವನ್ನು ಅರಿತು ಪ್ರತಿಯೊಬ್ಬರೂ ಮಳೆನೀರು ಸಂಗ್ರಹಣೆಗೆ ಆದ್ಯತೆ ನೀಡಬೇಕು. ಅಮೂಲ್ಯವಾದ ಜಲವನ್ನು ವ್ಯರ್ಥ ಮಾಡದೆ ಮುಂದಿನ ಪೀಳಿಗೆಗೂ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಕಿವಿಮಾತು ಹೇಳಿದರು.
ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ವೇ.ಮೂ. ಪರಮೇಶ್ವರ ಭಟ್ ಮಾರ್ಕಂಡೆ ದಂಪತಿ ದಿನಪ್ರಧಾನರಾಗಿ ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು.




