ಹೊಸದಿಗಂತ ವರದಿ ದಾವಣಗೆರೆ:
ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಚಿರತೆಯೊಂದು ತನ್ನನ್ನು ರಕ್ಷಿಸಿ ಸೆರೆಹಿಡಿಯಲು ಬಂದಿದ್ದ ಅರಣ್ಯ ಸಿಬ್ಬಂದಿ ಮೇಲೆಯೇ ದಾಳಿ ನಡೆಸಿದ ಘಟನೆ ಮಂಗಳವಾರ ತಾಲೂಕಿನ ಆನಗೋಡು ಸಮೀಪದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದಿದೆ. ಕೊನೆಗೂ ಚಿರತೆ ಸೆರೆಸಿಕ್ಕಿದ್ದು, ಗಾಯಾಳು ಸಿಬ್ಬಂದಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿರಬಹುದಾದ ಚಿರತೆಯು ಪಕ್ಕದ ಚರಂಡಿಯಲ್ಲಿ ನರಳಾಡುತ್ತಿತ್ತು. ಬೆಳಗ್ಗೆ ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿದ ಇಲಾಖೆ ಅಧಿಕಾರಿ, ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದರು.
ಈ ವೇಳೆ ಬಲೆ ಹಾಕುವ ಸಂದರ್ಭದಲ್ಲಿ ಚಿರತೆ ಏಕಾಏಕಿ ಇಲಾಖೆ ಸಿಬ್ಬಂದಿ ಮರಳಸಿದ್ದಪ್ಪ ಎಂಬುವರ ಮೇಲೆ ಎರಗಿ ದಾಳಿ ನಡೆಸಿದೆ. ಇದರಿಂದ ಮರಳಸಿದ್ದಪ್ಪನವರ ತೊಡೆ ಹಾಗೂ ಬೆನ್ನಿನ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ದಾವಣಗೆರೆಯ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಲಾಯಿತು.
ಇದನ್ನೂ ಓದಿ:
ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಮಾಡಿ, ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಸೆರೆಯಾದ ಚಿರತೆಯನ್ನು ವಿಜಯನಗರ ಜಿಲ್ಲೆ ಹಂಪಿ ಸಮೀಪದ ಕಮಲಾಪುರ ಝೋವಲಾಜಿಕಲ್ ಪಾರ್ಕ್ ಗೆ ಸ್ಥಳಾಂತರಿಸಲಾಯಿತು. ಚಿರತೆ ದಾಳಿಗೊಳಗಾದ ಮರುಳಸಿದ್ದಪ್ಪರನ್ನು ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ ಗಾಯಾಳು ಸಹೋದರ ನಾಗರಾಜ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಮುನ್ನೆಚ್ಚರಿಕೆ, ಸುರಕ್ಷತಾ ಕ್ರಮ ಅನುಸರಿಸದೇ, ಚಿರತೆ ಸೆರೆ ಕಾರ್ಯಾಚರಣೆ ಕೈಗೊಂಡಿದ್ದು ಸರಿಯಲ್ಲ. ಆಕಸ್ಮಾತ್ ಯಾರದಾದರೂ ಜೀವಕ್ಕೆ ಅಪಾಯವಾಗಿದ್ದರೆ ಯಾರು ಹೊಣೆ? ನನ್ನ ಅಣ್ಣ ಮರುಳಸಿದ್ದನಪ್ಪನ ಕೈ, ಬೆನ್ನು, ತೊಡೆ ಭಾಗಕ್ಕೆ ಚಿರತೆ ಗಂಭೀರವಾಗಿ ಗಾಯಗೊಳಿಸಿದೆ. ಸೂಕ್ತ ಪರಿಹಾರ, ನ್ಯಾಯ ಕೊಡಿಸಬೇಕು. ಇಲ್ಲವಾದರೆ ಅರಣ್ಯ ಇಲಾಖೆಯವರ ವಿರುದ್ಧ ಕೇಸ್ ದಾಖಲಿಸುವುದಾಗಿ ಅವರು ಎಚ್ಚರಿಸಿದ್ದಾರೆ.
ಅರಣ್ಯ ಸಿಬ್ಬಂದಿ ಮೇಲೆ ಚಿರತೆ ದಾಳಿ ನಡೆಸಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಮಾಯಕೊಂಡ ಶಾಸಕರೂ ಆದ ಮುಜರಾಯಿ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ ತಮ್ಮ ವಿಜಯನಗರ ಜಿಲ್ಲಾ ಪ್ರವಾಸವನ್ನು ಮೊಟಕುಗೊಳಿಸಿ, ದಾವಣಗೆರೆ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಧಾವಿಸಿದರು. ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮರಳಸಿದ್ದಪ್ಪನವರ ಆರೋಗ್ಯ ವಿಚಾರಿಸಿ, ವೈದ್ಯರಿಂದ ಮಾಹಿತಿ ಪಡೆದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸ್ಥಳದಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.



