ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣೇಶ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗ ಜನರು ಈಗಾಗಲೇ ತಮ್ಮ ನೆಚ್ಚಿನ ಗಣೇಶನ ಮೂರ್ತಿಯನ್ನು ತೆಗೆದುಕೊಂಡು ಬರುತ್ತಿದ್ದಾರೆ. ಈ ಬಾರಿ ಹಬ್ಬಕ್ಕೆ ಗಣೇಶ ಮೂರ್ತಿಯನ್ನು ತಯಾರಿಸುವವರು ಹಾಗೂ ಮಾರುವವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಷರತ್ತೊಂದನ್ನು ವಿಧಿಸಿದೆ.
ಈ ಬಾರಿ ಗಣೇಶನ ಹಬ್ಬಕ್ಕಾಗಿ ಪಿಒಪಿ ಗಣೇಶ ಮಾರಾಟ ಹಾಗೂ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಒಂದು ವೇಳೆ ಯಾರಾದರೂ ಮಾರಾಟ, ತಯಾರಿಕೆ ಕಂಡುಬಂದಲ್ಲಿ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗುತ್ತದೆ ಎಂದು ಜಿಬಿಎ ಎಚ್ಚರಿಕೆ ನೀಡಿದೆ.
ಗಣೇಶ ಕೂರಿಸೋದಕ್ಕೆ ಅನುಮತಿ
ನಿಮ್ಮ ನಿಮ್ಮ ಏರಿಯಾಗಳಲ್ಲಿ ಗಣಪತಿಯನ್ನು ಕೂರಿಸಲು ಮೊದಲು ಅನುಮತಿ ಪಡೆಯಬೇಕಾಗುತ್ತದೆ. ವಾರ್ಡ್‌ಗಳಲ್ಲಿ ನೋಡಲ್ ಕೇಂದ್ರ ಸ್ಥಾಪನೆ ಮಾಡಿದ್ದು, ಅಲ್ಲಿ ಅರ್ಜಿ ಹಾಕಬೇಕು. ಅರ್ಜಿ ಬಂದ ದಿನದಲ್ಲೇ ಅದನ್ನು ಪರಿಶೀಲಿಸಿ ಅನುಮತಿ ನೀಡಲಾಗುತ್ತದೆ. ಇನ್ನು ಮನೆಗಳಲ್ಲಿ ಇಡುವ ಪುಟ್ಟ ಮಣ್ಣಿನ ಗಣಪತಿಯನ್ನು ಮನೆಯ ಬಕೆಟ್‌ಗಳಲ್ಲಿ ಮುಳುಗಿಸಿ ನಂತರ ಮಣ್ಣನ್ನು ಗಾರ್ಡನ್ ಅಥವಾ ಹೂಕುಂಡಕ್ಕೆ ಹಾಕಬೇಕು ಎಂದು ಮನವಿ ಮಾಡಲಾಗಿದೆ. ಜಿಬಿಎ ನಿಗದಿ ಮಾಡಿರುವ ಜಾಗ ಬಿಟ್ಟು ಇನ್ನೆಲ್ಲಿಯೂ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡುವಂತಿಲ್ಲ. ಹೀಗೆ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಾಗುತ್ತದೆ.
ಪ್ಲಾಸ್ಟಿಕ್ ಸಂಪೂರ್ಣ ನಿಷೇಧ
ಈ ಬಾರಿ ಗಣಪತಿ ಹಬ್ಬದ ಸಂಭ್ರಮದ ವೇಳೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಪೆಂಡಾಲ್‌ಗಳಲ್ಲಿ ಪ್ಲಾಸ್ಟಿಕ್ ಕಂಡುಬಂದಲ್ಲಿ ಆಯೋಜಕರು ದಂಡ ಕಟ್ಟಬೇಕಿದೆ. ಪೆಂಡಾಲ್ ಅಳವಡಿಕೆ ಹಾಗೂ ಧ್ವನಿವರ್ಧಕಗಳ ಬಳಕೆಗೆ ಶುಲ್ಕ ಪಾವತಿ ಮಾಡಬೇಕಿದೆ. ಶುಲ್ಕ ಪಾವತಿ ಕಡ್ಡಾಯವಾಗಿದ್ದು, ಸ್ಥಳೀಯ ಪೊಲೀಸ್ ಠಾಣೆ ಅಥವಾ ಬೆಂಗಳೂರು ಒನ್‌ನಲ್ಲಿ ಶುಲ್ಕ ಪಾವತಿಗೆ ಅವಕಾಶ ನೀಡಲಾಗಿದೆ. ಶುಲ್ಕ ಪಾವತಿಯ ರಸೀದಿ ಅರ್ಜಿ ಜೊತೆ ಲಗತ್ತಿಸಿದರೆ ಮಾತ್ರ ಜಿಬಿಎಯಿಂದ ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ಅನುಮತಿ ನೀಡಲಾಗುವುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.



