September 9, 2026
Wednesday, September 9, 2026
spot_img

ಜ್ವರ, ಕೆಮ್ಮು, ನೆಗಡಿಗೆಲ್ಲಾ ಆಸ್ಪತ್ರೆ ಯಾಕೆ? ಮರೆಯಬೇಡಿ, ನಿಮ್ಮ ಅಡುಗೆ ಮನೆಯೇ ಔಷಧಾಲಯ

ರಾಜ್ಯದಾದ್ಯಂತ ಜ್ವರದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಜ್ವರದ ಜೊತೆ ಕಫಯುಕ್ತ ಕೆಮ್ಮು, ಮೈ ಕೈ ನೋವು ಕೂಡ ಜನರನ್ನು ಬಾಧಿಸುತ್ತಿದೆ. ಉದ್ಯೋಗಕ್ಕೆ ತೆರಳುವವರು, ಶಾಲೆಗಳಿಗೆ ಹೋಗುವ ಮಕ್ಕಳಿಗೆ ಒಮ್ಮೆ ಈ ರೀತಿಯ ಜ್ವರವನ್ನು ಅನುಭವಿಸಿದ್ದಲ್ಲಿ ಅದರಿಂದ ಗುಣಮುಖವಾಗುವುದು ದೀರ್ಘ ಸಮಯದ ಹೋರಾಟದಂತೆ ಭಾಸವಾಗುತ್ತದೆ.

ಆಧುನಿಕ ಔಷಧಿಗಳು ಈ ರೀತಿಯ ಸಮಸ್ಯೆಗೆ ತ್ವರಿತ ಆರಾಮ ನೀಡುವುದಾದರೂ, ಆಯುರ್ವೇದ ರೋಗ ಲಕ್ಷಣಗಳನ್ನು ತಗ್ಗಿಸಿ ದೇಹಕ್ಕೆ ಚೈತನ್ಯ ಹೆಚ್ಚಿಸುವ ಕೆಲಸವನ್ನೂ ಮಾಡುತ್ತವೆ ಜೊತೆಗೆ ದೇಹದಲ್ಲಿನ ಟಾಕ್ಸಿಕ್ ಅಂಶಗಳು ಹೊರಗೋಗುವಂತೆ ಮಾಡಿ ದೇಹ ಶುದ್ದಿಗೊಳಿಸುವ ಕಾರ್ಯವನ್ನೂ ಮಾಡುತ್ತವೆ. ನಮ್ಮ ಅಡುಗೆ ಮನೆಗಳಲ್ಲಿ ಯಾವೆಲ್ಲಾ ಔಷಧಗಳಿವೆ, ಅವು ಹೇಗೆ ಕೆಲಸ ಮಾಡುತ್ತವೆ ಎನ್ನುವ ಬಗ್ಗೆ ವಿಸ್ತೃತ ಮಾಹಿತಿ ನೀಡಿದ್ದಾರೆ ಡಾ. ಮುರಳೀಧರ ಆರ್. ಬಲ್ಲಾಳ್

ನಿಮ್ಮ ಅಡುಗೆ ಮನೆಯೇ ಔಷಧಾಲಯ ಎಂಬುದು ನೆನಪಿಡಿ!

ಜ್ವರದಂತಹ ಸಮಸ್ಯೆಗಳಿಗೆ ಆತಂಕಗೊಳ್ಳುವ ಅವಶ್ಯಕತೆ ಇಲ್ಲ, ನಿಮ್ಮ ಅಡುಗೆ ಮನೆಯಲ್ಲಿನ ಆಹಾರ ಪದಾರ್ಥಗಳೇ ಸಾಕಷ್ಟು ಆರೋಗ್ಯ ಸಮಸ್ಯೆಗೆ ಔಷಧವಾಗಿ ಕೆಲಸ ಮಾಡುತ್ತವೆ. ಜ್ವರ ಉಪಶಮನದ ಸಂಪೂರ್ಣ ಕಿಟ್ ಮನೆಯಲ್ಲಿ ಇರುತ್ತವೆ, ಆ ಬಗ್ಗೆ ಅರಿವು ಹೊಂದುವುದು ಮುಖ್ಯವಾಗುತ್ತದೆ.

ಗಂಟಲು ಮತ್ತು ಮೂಗಿನಲ್ಲಿ ಕಿರಿಕಿರಿ : ಇವು ವೈರಲ್ ಸೋಂಕಿನ ಆರಂಭಿಕ ಲಕ್ಷಣಗಳಾಗಿರುತ್ತದೆ. ಹೀಗಾಗಿ ಕಿರಾತ ಕಡ್ಡಿ (chirata)ಯ ಚಹಾ ಅಥವಾ ಡಿಕಾಕ್ಷನ್ ಜೊತೆಗೆ ಏಲಕ್ಕಿಯನ್ನು ಅಗಿಯುವುದರಿಂದ ಗಂಟಲು ಕಿರಿಕಿರಿಯಂತಹ ಲಕ್ಷಣಗಳು ಗುಣವಾಗುತ್ತವೆ.

ನಿರಂತರ ಸೀನು : ವೈರಲ್ ಸೋಂಕು ಹೆಚ್ಚುತ್ತಿರುವ ಹಾಗೂ ಹರಡುತ್ತಿರುವ ಲಕ್ಷಣವಾಗಿರುವುದರಿಂದ ಬೆಳಗಿನ ಸಮಯದಲ್ಲಿ ಏಳು ತುಳಸಿ ಎಲೆಗಳು ಮತ್ತು ನಾಲ್ಕು ಏಲಕ್ಕಿಯನ್ನು ಅಗಿಯುವುದರಿಂದ ಈ ಲಕ್ಷಣವನ್ನು ಗುಣಪಡಿಸಬಹುದು.

ಮೂಗು ಕಟ್ಟುವಿಕೆ: ಉಸಿರಾಡಲು ಕಷ್ಟವಾಗುವುದು, ಮೂಗು ಕಟ್ಟಿದಂತಹ ಸಂದರ್ಭದಲ್ಲಿ ನೀರಿನ ಉಗಿ ಅಥವಾ ನೀಲಗಿರಿ ಎಣ್ಣೆಯ ಹಬೆ ತೆಗೆದುಕೊಳ್ಳುವುದರಿಂದ ಮೂಗು ಕಟ್ಟುವ ಸಮಸ್ಯೆಯನ್ನು ದೂರವಾಗಿಸಬಹುದು.

ಹಸಿವಾಗದಿರುವುದು, ಮೈಕೈ ನೋವು : ಇದು ದೇಹದ ರೋಗ ನಿರೋಧಕ ಶಕ್ತಿಯು ವೈರಲ್ ಸೋಂಕಿನ ವಿರುದ್ಧ ಹೋರಾಡುವ ಲಕ್ಷಣವಾಗಿದೆ. ಈ ಸಂದರ್ಭದಲ್ಲಿ ಶುಂಠಿ ಜೊತೆ ಜೇನುತುಪ್ಪ ಬೆರಸಿ ಜ್ಯೂಸ್ ತಯಾರಿಸಿ ಸೇವನೆ ಅಥವಾ ಅರಿಶಿಣ ಬೆರೆಸಿದ ಹಾಲಿನ ಸೇವನೆಯಿಂದ ಇಂತಹ ರೋಗಲಕ್ಷಣವನ್ನು ಗುಣಪಡಿಸಬಹುದು.

ಸಣ್ಣ ಜ್ವರ : ಇದು ಕೂಡ ನಿಮ್ಮ ದೇಹ ವೈರಲ್ ಸೋಂಕಿನ ಜೊತೆ ಹೋರಾಡುತ್ತಿರುವ ಲಕ್ಷಣವಾಗಿದೆ. ಈ ಸಂದರ್ಭದಲ್ಲಿ ಕೊತ್ತಂಬರಿ ಕುದಿಸಿದ ನೀರು ಅಥವಾ ಲೆಮನ್ ಗ್ರಾಸ್ (ಮಜ್ಜಿಗೆ ಹುಲ್ಲಿನ) ಟೀ ಸೇವನೆಯಿಂದ ಈ ಲಕ್ಷಣಗಳನ್ನು ತಗ್ಗಿಸಬಹುದು.

ಒಣ ಕೆಮ್ಮು : ಈ ಸಮಸ್ಯೆಗೆ ಒಣ ದ್ರಾಕ್ಷಿ ಮತ್ತು ಕಾಳು ಮೆಣಸನ್ನು ಆಗಾಗ್ಗೆ ಅಗಿಯುವುದರಿಂದ ಒಣ ಕೆಮ್ಮು ಬಲು ಬೇಗ ಗುಣವಾಗುತ್ತದೆ. ಅಲ್ಲದೇ ಬೆಚ್ಚಗಿನ ೨ ಹನಿ ಎಳ್ಳಿನ ಎಣ್ಣೆಯನ್ನು ಮೂಗಿನ ಹೊಳ್ಳೆಗಳಿಗೆ ಬಿಡುವುದರಿಂದ ಪ್ರತಿರೋಧಕದಂತೆ ಕೆಲಸ ಮಾಡಿ ವೈರಾಣುಗಳು ಮೂಗಿನ ನಾಳಗಳಿಗೆ ಅಂಟಿಕೊಳ್ಳದಂತೆ ಕಾಪಾಡುತ್ತದೆ.

ಆಯುರ್ವೇದದಲ್ಲಿ ಜ್ವರ ನಿರ್ವಹಣೆಗೆ ಹೆಸರಾಗಿರುವ ಸುದರ್ಶನ ಚೂರ್ಣವು ಅನೇಕ ಔಷಧೀಯ ದ್ರವ್ಯಗಳ ಸಂಯೋಜನೆಯಾಗಿದೆ. ಕಹಿ ರಸದ ಪ್ರಧಾನ ಗುಣಗಳನ್ನು ಹೊಂದಿರುವ ಈ ಔಷಧಿ ಜ್ವರದ ಸಂದರ್ಭಗಳಲ್ಲಿ ದೇಹದ ಚಯಾಪಚಯ ಕ್ರಿಯೆಯನ್ನು ಸಮತೋಲನಗೊಳಿಸಲು, ರೋಗನಿರೋಧಕ ಶಕ್ತಿಯನ್ನು ಬೆಂಬಲಿಸಲು ಹಾಗೂ ಚೇತರಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ನೆರವಾಗುತ್ತದೆ ಎಂದು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ವೈರಲ್ ಸೋಂಕಿನ ನಂತರವೂ ದೀರ್ಘಕಾಲ ಆಯಾಸ ಅಥವಾ ಪದೇ ಪದೇ ಜ್ವರ ಬರುವ ಸಮಸ್ಯೆ ಇರುವವರಿಗೆ ವೈದ್ಯರ ಸಲಹೆಯಂತೆ ಇದರ ಬಳಕೆ ಉಪಯುಕ್ತವಾಗಬಹುದು. ಸುದರ್ಶನ ಚೂರ್ಣ ಮಾತ್ರೆಯನ್ನು ದಿನಕ್ಕೆ ಎರಡು ಬಾರಿ ಅಗಿಯುವುದರಿಂದ ಜ್ವರದಿಂದ ಬೇಗ ಗುಣಮುಖವಾಗಲು ಹಾಗೇ ಪದೇ ಪದೇ ಜ್ವರ ಸಮಸ್ಯೆ ಬಾಧಿಸದೇ ಇರುವಂತೆ ರಕ್ಷಣೆ ನೀಡುತ್ತದೆ.

ದೇಹಕ್ಕೆ ಒತ್ತಡ ನೀಡಬೇಡಿ!

ಜ್ವರ ಹೆಚ್ಚಾದ ಸಂದರ್ಭದಲ್ಲಿ ಹಸಿವು ಕಡಿಮೆಯಾಗುತ್ತದೆ. ಹೀಗಿರುವಾಗ ಡೈರಿ ಉತ್ಪನ್ನಗಳು, ಮಾಂಸಾಹಾರವನ್ನು ದೇಹಕ್ಕೆ ಹೆಚ್ಚಾಗಿ ಸೇವಿಸಬೇಡಿ , ಇದು ಮತ್ತಷ್ಟು ಕಫ ಹೆಚ್ಚಿಸಲು ಕಾರಣವಾಗುತ್ತದೆ. ಅದರ ಬದಲು ಅರಿಶಿಣ, ಜೀರಿಗೆ ಸೇರಿಸಿದ ಹೆಸರು ಬೇಳೆ ಗಂಜಿ ಯಂತಹ ಆಹಾರ ಸೇವನೆ ಉತ್ತಮ. ಇದು ದೇಹವನ್ನು ಹೈಡ್ರೇಟ್ ಮಾಡುವುದಲ್ಲದೇ, ದೇಹದ ಸಂಪೂರ್ಣ ಶಕ್ತಿ ರೋಗದ ವಿರುದ್ಧ ಹೋರಾಡಲು ಮೀಸಲಿಡುತ್ತದೆ ಹೀಗಾಗಿ ಸುಲಭವಾಗಿ ಜೀರ್ಣವಾಗುವ ಆಹಾರ ಸೇವನೆ ಉತ್ತಮ.

ಆಯುರ್ವೇದವು ಒಂದು ಘಳಿಗೆಯಲ್ಲಿ ಗುಣಪಡಿಸುವ ಚಿಕಿತ್ಸೆಯನ್ನು ನೀಡುವುದಿಲ್ಲ, ಆದರೆ ಆಯುರ್ವೇದ ಸಲಹೆ ನೀಡುವ ನೈಸರ್ಗಿಕ ಔಷಧಗಳು ನಿಮಗೆ ಜ್ವರದ ವಿರುದ್ಧ ಹೋರಾಡುವುದಲ್ಲದೇ , ನಿಮ್ಮ ದೇಹ ಪಕೃತಿಯು ತನ್ನ ಮೊದಲ ಸ್ಥಾನಕ್ಕೆ ತೆರಳುವಂತೆ ಮಾರ್ಗದರ್ಶನವನ್ನೂ ನೀಡುತ್ತದೆ. ಮತ್ತೆ ಎಂದಾದರೂ ಗಂಟಲ್ಲಲಿ ಕಿರಿಕಿರಿ ಉಂಟಾದರೆ ನಿಮ್ಮ ಅಡುಗೆ ಮನೆಯ ಮಸಾಲೆ ಪದಾರ್ಥಗಳತ್ತ ಒಮ್ಮೆ ಗಮನ ಹರಿಸಿ. ನೈಸರ್ಗಿಕ ಅಂಶಗಳಿಂದ ಗುಣಮುಖವಾದಾಗ , ಜ್ವರದಂತಹ ಸಮಸ್ಯೆ ಮತ್ತೆ ಬಾಧಿಸುವ ಪ್ರಮಾಣವು ಕಡಿಮೆಯಾಗುತ್ತದೆ.

  • ಡಾ. ಮುರಳೀಧರ ಆರ್ ಬಲ್ಲಾಳ್
    ಜನರಲ್ ಮ್ಯಾನೇಜರ್
    ಎಸ್‌ಡಿಎಮ್ ಆಯುರ್ವೇದ ಫಾರ್ಮಸಿ, ಉಡುಪಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !