ಬ್ರೇಕ್ ಅಪ್ ಆದಾಗ ಅಥವಾ ನಮಗೆ ತುಂಬಾ ಹತ್ತಿರವಾದವರು ನಮ್ಮನ್ನು ಬಿಟ್ಟು ಹೋದಾಗ, “ಮೈ ಹಾರ್ಟ್ ಈಸ್ ಬ್ರೋಕನ್” ಎಂದು ಪ್ರತಿಯೊಬ್ಬರೂ ಹೇಳೋದನ್ನ ಕೇಳಿರ್ತೀವಿ. ಸಿನಿಮಾಗಳಲ್ಲಂತೂ ಬ್ರೇಕ್ ಅಪ್ ಆಗಿ ದೇವದಾಸರಾಗೋದನ್ನ ನೋಡಿರ್ತೀವಿ. ಆದರೆ ನಿಜವಾಗ್ಲೂ ಪ್ರೀತಿ ಮುರಿದುಬಿದ್ದಾಗ ಅಥವಾ ಅತಿಯಾದ ದುಃಖ ಬಂದಾಗ ಮನುಷ್ಯ ಸತ್ತು ಹೋಗೋಕೆ ಸಾಧ್ಯನಾ?
ಆದರೆ ಇದರ ಬಗ್ಗೆ ಹಾರ್ಟ್ ಸರ್ಜನ್‌ಗಳು ಏನು ಹೇಳ್ತಾರೆ ಗೊತ್ತಾ? ಅತಿಯಾದ ದುಃಖದಿಂದ ಮನುಷ್ಯ ನಿಜವಾಗ್ಲೂ ಸಾಯಬಹುದು! ಅಂತಾರೆ.
ಜನಸಾಮಾನ್ಯರಿಗೆ ತಿಳಿಯದ ಈ ಕಟು ಸತ್ಯದ ಹಿಂದೆ ದೊಡ್ಡ ವಿಜ್ಞಾನವೇ ಇದೆ. ವೈದ್ಯಕೀಯ ಲೋಕದಲ್ಲಿ ಇದನ್ನು ‘ಬ್ರೋಕನ್ ಹಾರ್ಟ್ ಸಿಂಡ್ರೋಮ್’ ಎಂದು ಕರೆಯುತ್ತಾರೆ.
ಬ್ರೇಕ್ ಅಪ್ ಆದಾಗ ಹಾರ್ಟ್‌ನಲ್ಲಿ ಏನಾಗುತ್ತೆ?
ನಮಗೆ ಹಾರ್ಟ್ ಅಟ್ಯಾಕ್ ಅಂದ ತಕ್ಷಣ ನೆನಪಾಗೋದು ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗಿ ರಕ್ತ ಸಂಚಾರ ಬಂದ್ ಆಗೋದು. ಆದರೆ ಈ ‘ಬ್ರೋಕನ್ ಹಾರ್ಟ್’ ಕಥೆಯೇ ಬೇರೆ. ನಾವು ಅತಿಯಾದ ಆಘಾತ, ತೀವ್ರ ದುಃಖ ಅಥವಾ ದಿಢೀರ್ ಶಾಕ್ ಅನುಭವಿಸಿದಾಗ, ನಮ್ಮ ಮೆದುಳು ರಕ್ತಕ್ಕೆ ‘ಅಡ್ರಿನಲಿನ್’ ನಂತಹ ಹಾರ್ಮೋನ್‌ಗಳನ್ನು ಒಂದೇ ಸಮನೆ ಸರ್ಕ್ಯುಲೇಟ್ ಮಾಡಲು ಶುರು ಮಾಡುತ್ತದೆ. ಇದನ್ನು “ಸ್ಟ್ರೆಸ್ ಹಾರ್ಮೋನ್” ಎನ್ನಬಹುದು.
ಈ ಹಾರ್ಮೋನ್‌ಗಳ ಪ್ರಮಾಣ ಎಷ್ಟೊಂದು ಹೆಚ್ಚಾಗುತ್ತದೆ ಎಂದರೆ, ಅವು ಸಡನ್ ಆಗಿ ಹೃದಯದ ರಕ್ತನಾಳಗಳನ್ನು ಕಿರಿದಾಗಿಸಿ, ಹೃದಯದ ಪಂಪಿಂಗ್ ಸಾಮರ್ಥ್ಯವನ್ನು ಕೆಲ ಕಾಲ ಪಾರ್ಶ್ವವಾಯು ಹೊಡೆದಂತೆ ಮಾಡಿಬಿಡುತ್ತವೆ. ಪರಿಣಾಮವಾಗಿ, ಹೃದಯದ ಕೆಳಗಿನ ಭಾಗ ಬಲೂನ್ ತರಹ ಉಬ್ಬಿಕೊಂಡು, ರಕ್ತ ಸರಿಯಾಗಿ ಪಂಪ್ ಆಗುವುದಿಲ್ಲ.
ಒರಿಜಿನಲ್ ಹಾರ್ಟ್ ಅಟ್ಯಾಕ್ ತರಾನೇ ಕಾಣುತ್ತೆ
ಯಾರಾದರೂ ಬ್ರೋಕನ್ ಹಾರ್ಟ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದರೆ, ಅವರಿಗೆ ಬರುವ ರೋಗಲಕ್ಷಣಗಳು ಥೇಟ್ ಹಾರ್ಟ್ ಅಟ್ಯಾಕ್‌ನಂತೆಯೇ ಇರುತ್ತವೆ.
ಎದೆ ಭಾಗದಲ್ಲಿ ವಿಪರೀತ ನೋವು ಮತ್ತು ಎದೆ ಬಿಗಿಯಾದ ಅನುಭವ, ಉಸಿರಾಟಕ್ಕೆ ತೊಂದರೆ ಮತ್ತು ಏದುಸಿರು ಬರುವುದು, ದಿಢೀರ್ ತಲೆಸುತ್ತು ಮತ್ತು ಕೈ-ಕಾಲು ತಣ್ಣಗಾಗುವುದು.
ಆಸ್ಪತ್ರೆಗೆ ಕರೆದುಕೊಂಡು ಹೋಗಿ ECG ಮಾಡಿದಾಗಲೂ ಕೂಡ ಇದು ಹಾರ್ಟ್ ಅಟ್ಯಾಕ್ ಎಂದೇ ತೋರಿಸುತ್ತದೆ. ಆದರೆ, ಡಾಕ್ಟರ್‌ಗಳು ಆಂಜಿಯೋಗ್ರಾಮ್ ಮಾಡಿ ನೋಡಿದಾಗ ಅಲ್ಲಿ ಯಾವುದೇ ರಕ್ತನಾಳದ ಬ್ಲಾಕೇಜ್ ಇರುವುದಿಲ್ಲ. ಬದಲಿಗೆ ತೀವ್ರವಾದ ಮಾನಸಿಕ ಆಘಾತದಿಂದ ಹೃದಯ ಸ್ತಬ್ಧಗೊಂಡಿರುತ್ತದೆ.
ಇದು ಪ್ರಾಣ ತೆಗೆಯುತ್ತಾ?
ಶೇಕಡಾ 90 ರಷ್ಟು ಪ್ರಕರಣಗಳಲ್ಲಿ, ಸರಿಯಾದ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ಮತ್ತು ಮಾನಸಿಕ ನೆರವು ಸಿಕ್ಕರೆ ಕೆಲವೇ ವಾರಗಳಲ್ಲಿ ಹೃದಯ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಆದರೆ, ದುರದೃಷ್ಟವಶಾತ್ ಕೆಲವರಲ್ಲಿ ಈ ಸ್ಟ್ರೆಸ್ ಹಾರ್ಮೋನ್‌ನ ಪ್ರಭಾವ ಎಷ್ಟು ಭೀಕರವಾಗಿರುತ್ತದೆ ಎಂದರೆ, ಹೃದಯದ ಬಡಿತ ತೀವ್ರವಾಗಿ ವ್ಯತ್ಯಾಸಗೊಂಡು ಅಥವಾ ಹಾರ್ಟ್ ಫೇಲ್ಯೂರ್ ಆಗಿ ಮನುಷ್ಯ ಪ್ರಾಣವನ್ನೇ ಕಳೆದುಕೊಳ್ಳಬಹುದು.
ವಿಶೇಷವಾಗಿ, ಪ್ರೀತಿಪಾತ್ರರನ್ನು ಕಳೆದುಕೊಂಡ ವೃದ್ಧರಲ್ಲಿ ಮತ್ತು ಪ್ರೇಮಭಂಗದಿಂದ ತೀವ್ರ ಖಿನ್ನತೆಗೆ ಒಳಗಾದ ಯುವಜನರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ.
ಪ್ರೀತಿ-ಪ್ರೇಮ, ಬ್ರೇಕ್ ಅಪ್ ಎಂಬುದು ಬರಿ ಮನಸ್ಸಿಗೆ ಸಂಬಂಧಿಸಿದ ಭಾವನೆಯಷ್ಟೇ ಅಲ್ಲ. ಅದು ನಮ್ಮ ಹೃದಯದ ಆರೋಗ್ಯದ ಮೇಲೂ ನೇರ ಪರಿಣಾಮ ಬೀರುತ್ತದೆ. ಹಾಗಾಗಿ, ಬ್ರೇಕ್ ಅಪ್ ಅಥವಾ ದುಃಖ ಬಂದಾಗ ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಕೊಳೆಯುವ ಬದಲು, ಸ್ನೇಹಿತರ ಬಳಿ ಹಂಚಿಕೊಳ್ಳಿ, ಹೊರಗೆ ಬನ್ನಿ. ಏಕೆಂದರೆ “ಹಾರ್ಟ್ ಬ್ರೇಕ್” ಎನ್ನುವುದು ಬರಿ ಹಾಡಿನ ಸಾಲಲ್ಲ, ಜೀವ ತೆಗೆಯುವ ನಿಜವಾದ ಕಾಯಿಲೆ.



