ಹೊಸದಿಗಂತ ವರದಿ ಬಳ್ಳಾರಿ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಜನರಿಂದ ಅಭೂತಪೂರ್ವ ಬೆಂಬಲ ದೊರೆತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಿ ರಾಯಚೂರು ಜಿಲ್ಲೆಯ ಲಿಂಗಸೂರು ನಿಂದ ಬಳ್ಳಾರಿ ವರೆಗೆ ಯಶಸ್ವಿಯಾಗಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ಬುಧವಾರ 9ನೇ ದಿನಕ್ಕೆ ಕಾಲಿಟ್ಟಿದ್ದು, ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕುಡುತಿನಿ ಪಟ್ಟಣದಿಂದ 20 ಕೀ. ಮೀ. ಪಾದಯಾತ್ರೆ ಪ್ರಾರಂಭಗೊಂಡಿತು.
ಅಲ್ಲಿಂದ ನೇರವಾಗಿ ಬಳ್ಳಾರಿಯ ಬಿಐಟಿಎಂ ಕಾಲೇಜು ಸಮೀಪದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇಗುಲ ತಲುಪಿತು. ಅಲ್ಲಿಂದ ಸಂಜೆ ಬಳ್ಳಾರಿ ನಗರಕ್ಕೆ ಅದ್ದೂರಿಯಾಗಿ ಪ್ರವೇಶಿಸಿತು. ಬಿಜೆಪಿಯ ಬಹುತೇಕ ಎಲ್ಲ ಅಗ್ರಗಣ್ಯ ನಾಯಕರು ವಿಜಯೇಂದ್ರ ಅವರೊಂದಿಗೆ ಬಳ್ಳಾರಿ ನಗರಕ್ಕೆ ಹೆಜ್ಜೆ ಹಾಕಿದರು. ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್, ಸಿ. ಟಿ.ರವಿ, ಸುರೇಶ ಕುಮಾರ್, ಬಿ.ಶ್ರೀರಾಮುಲು, ಗಾಲಿ ಜನಾರ್ಧನ ರೆಡ್ಡಿ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಗಾಲಿ ಸೋಮಶೇಖರ್ ರೆಡ್ಡಿ, ಬಂಗಾರು ಹನುಮಂತು, ಕೆ.ಎಸ್.ದಿವಾಕರ್, ಟಿ. ಎಚ್.ಸುರೇಶ್ ಬಾಬು ಸೇರಿದಂತೆ ಬಿಜೆಪಿ ಅನೇಕ ನಾಯಕರು, ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ ಬಿಜೆಪಿ ಸಾವಿರಾರು, ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.
ಕುಡುತಿನಿ ಪಟ್ಟಣದಿಂದ ಬಳ್ಳಾರಿ ಕಡೆಗೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ಕುಡುತಿನಿ ಪಟ್ಟಣದಿಂದ ಬಳ್ಳಾರಿ ಕಡೆಗೆ ಬುಧವಾರ ಅದ್ದೂರಿಯಾಗಿ ಸಾಗಿತು. ಕುಡುತಿನಿ ಪಟ್ಟಣದಲ್ಲಿ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರೈತರು, ಮುಖಂಡರು ಕಳೆದ 1357 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ರೈತ ಮುಖಂಡರು ನಾನಾ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.
ನಿಮ್ಮ ಜತೆ ನಾವಿದ್ದೇವೆ ಆತಂಕ ಬೇಡ

ನಂತರ ವಿಜಯೇಂದ್ರ ಅವರು ಮಾತನಾಡಿ, ರೈತರು ಹಾಗೂ ಮುಖಂಡರು ಕಳೆದ 1357 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಇದಕ್ಕೆ ಸರ್ಕಾರ ಸ್ಪಂದಿಸದಿರುವುದು ದೊಡ್ಡ ದುರಂತ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ನಿಮ್ಮ ಎಲ್ಲ ಸಮಸ್ಯೆಗಳಿಗೆ ಖಂಡಿತ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ರೈತರು ಮಾತನಾಡಿ, ಈ ಹಿಂದೆ ಈ ಭಾಗದ ರೈತರಿಂದ ಲಕ್ಷ್ಮೀ ಮಿತ್ತಲ್ ಸೇರಿದಂತೆ ನಾನಾ ಕಂಪನಿಗಳು ಈ ಭಾಗದಲ್ಲಿ ಕೈಗಾರಿಕ ಘಟಕ ನಿರ್ಮಿಸಲಾಗುವುದು ಎಂದು ರೈತರಿಂದ ಕಳೆದ 2010ರಲ್ಲಿಯೇ ಸಾವಿರಾರು ಎಕರೆ ಭೂಮಿಯನ್ನು ಸ್ವಾದೀನ ಪಡಿಸಿಕೊಳ್ಳಲಾಗಿತ್ತು. ಪ್ರತಿ ಎಕರೆಗೆ 5 ಲಕ್ಷ, 8 ಲಕ್ಷ ಸೇರಿದಂತೆ 12 ಲಕ್ಷದ ವರೆಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಭೂಮಿಯನ್ನು ಖರೀದಿಸಿ, ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು.
ಜಮೀನು ಕಳೆದುಕೊಂಡ ರೈತ ಕುಟುಂಬದವರಿಗೆ ಶಾಶ್ವತ ಉದ್ಯೋಗದ ಭರವಸೆಯು ನೀಡಿದ್ದರು. ಆದರೆ, 16 ವರ್ಷ ಕಳೆದರೂ ಇಲ್ಲಿವರೆಗೂ ಯಾವುದೇ ಕೈಗಾರಿಕೆ ಘಟಕ ಪ್ರಾರಂಭಿಸಿಲ್ಲ, ಉದ್ಯೋಗವೂ ಇಲ್ಲ, ಲಕ್ಷಾಂತರ ಬೆಲೆ ಬಾಳುವ ಜಮೀನನ್ನು ಕಳೆದುಕೊಂಡು ನಾವು ಕಂಗಾಲಾಗಿದ್ದೇವೆ. ಈಗ ನಮ್ಮ ಜಮೀನನ್ನೇ ಬೇರೆಯವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ, ಸದ್ಯ ಎಕರೆಗೆ 20 ಲಕ್ಷ ರೂ.ವರೆಗೆ ನಡೆಸಿದೆ, ಇದು ನಮ್ಮ ರೈತರಿಗೆ ಮಾಡಿದ ವಂಚನೆಯಾಗಿದೆ. ಒಪ್ಪದಂತೆ ಕಾರ್ಖಾನೆ ಸ್ಥಾಪಿಸಿ, ಸೂಕ್ತ ಪರಿಹಾರ ನೀಡಿ, ಇಲ್ಲವೇ ನಮ್ಮ ಜಮೀನು ನಮಗೆ ವಾಪಸ್ಸು ಕೊಡಿಸಿ ಎಂದು ರೈತರು ಮನವಿ ಮಾಡಿದರು. ನಿಮ್ಮ ಸಮಸ್ಯೆ ಅರ್ಥವಾಗಿದೆ, ನಿಮ್ಮೊಂದಿಗೆ ನಾವಿದ್ದೇವೆ ಆತಂಕ ಬೇಡ ಎಂದು ವಿಜಯೇಂದ್ರ ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀರಾಮುಲು, ಬಂಗಾರು ಹನುಮಂತು, ಕೆ.ಎಸ್.ದಿವಾಕರ್ ಸೇರಿದಂತೆ ಇತರರಿದ್ದರು.



