ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ಗಾಂಧಿನಗರದ ಕುಡಾಸಣ್ ಪ್ರದೇಶದಲ್ಲಿ ಬುಧವಾರ ರಾತ್ರಿ ಭೀಕರ ಅಪಘಡವೊಂದು ಸಂಭವಿಸಿದೆ. ನಿರ್ಮಾಣ ಹಂತದ ಕಟ್ಟಡದ ಸೈಟ್ನಲ್ಲಿ ಕೆಲಸ ನಡೆಯುತ್ತಿದ್ದಾಗ ಬೃಹತ್ ಕ್ರೇನ್ ಒಂದು ನಿಯಂತ್ರಣ ತಪ್ಪಿ ಒಮ್ಮೆಗೆ ಕುಸಿದು ಬಿದ್ದಿದೆ. ಈ ದುರಂತದಲ್ಲಿ ಸುಮಾರು 12 ರಿಂದ 15 ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರು ಆತಂಕ ಇದೀಗ ಎದುರಾಗಿದೆ.
ಯುದ್ಧೋಪಾದಿಯಲ್ಲಿ ಸಾಗಿದ ಕಾರ್ಯಾಚರಣೆ
ಅಪಘಾತದ ಭೀಕರ ಶಬ್ದ ಕೇಳುತ್ತಿದ್ದಂತೆ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಇನ್ಫೋಸಿಟಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ತಂಡಗಳು ಜಂಟಿಯಾಗಿ ಸ್ಥಳಕ್ಕೆ ಧಾವಿಸಿವೆ. ಸದ್ಯ ನಾಲ್ಕಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಮತ್ತು ವಿಶೇಷ ರಕ್ಷಣಾ ಪಡೆಗಳು ಸ್ಥಳದಲ್ಲಿದ್ದು, ಗ್ಯಾಸ್ ಕಟ್ಟರ್ಗಳು ಹಾಗೂ ಜೆಸಿಬಿಗಳ ಸಹಾಯದಿಂದ ಅವಶೇಷಗಳಡಿ ಸಿಲುಕಿರುವ ಕಾರ್ಮಿಕರನ್ನು ಹೊರತೆಗೆಯಲು ಹೋರಾಡುತ್ತಿದ್ದು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಲಲಾಗಿದೆ.
ಸ್ಥಳಕ್ಕೆ ಧಾವಿಸಿದ ಉಪಮುಖ್ಯಮಂತ್ರಿ
ವಿಷಯ ತಿಳಿಯುತ್ತಿದ್ದಂತೆಯೇ ಗುಜರಾತ್ನ ಉಪಮುಖ್ಯಮಂತ್ರಿಗಳುತಕ್ಷಣವೇ ಕುಡಾಸಣ್ನ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲೇ ಇದ್ದು, ಪ್ರತಿಯೊಬ್ಬ ಕಾರ್ಮಿಕನನ್ನು ಸುರಕ್ಷಿತವಾಗಿ ಹೊರತೆಗೆಯಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಇನ್ನಷ್ಟೆ ತಿಳಿಯಬೇಕಿದೆ.



