ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಕರ್ನಾಟಕದಾದ್ಯಂತ ಮೋಡಕವಿದ ಹಿತಕರ ವಾತಾವರಣವಿರಲಿದ್ದು, ತಾಪಮಾನದಲ್ಲಿ ಇಳಿಕೆಯಾಗಿ ವಾತಾವರಣ ತಂಪಾಗಿರಲಿದೆ. ಗರಿಷ್ಠ ತಾಪಮಾನ 32°C ಹಾಗೂ ಕನಿಷ್ಠ ತಾಪಮಾನ 22°C ದಾಖಲಾಗುವ ನಿರೀಕ್ಷೆಯಿದೆ.
ದಿನವಿಡೀ ತಂಪಾದ ಗಾಳಿಯೊಂದಿಗೆ ಭಾಗಶಃ ಬಿಸಿಲು ಮೂಡಲಿದ್ದು, ವಾಯುವ್ಯ ದಿಕ್ಕಿನಿಂದ ಗಂಟೆಗೆ 16 ಕಿ.ಮೀ ವೇಗದಲ್ಲಿ ತಂಗಾಳಿ ಬೀಸಲಿದೆ.
ಕರಾವಳಿ ಹಾಗೂ ಮಲೆನಾಡಿನ ಸೌಂದರ್ಯವನ್ನು ಇಮ್ಮಡಿಗೊಳಿಸಲು ವರುಣದೇವ ಸಜ್ಜಾಗಿದ್ದಾನೆ. ಮುಂದಿನ 24 ಗಂಟೆಗಳಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಸಮೃದ್ಧವಾಗಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
ಈ ಮಳೆಯು ಕೃಷಿ ಚಟುವಟಿಕೆಗಳಿಗೆ ಮತ್ತು ಜಲಮೂಲಗಳ ಭರ್ತಿಗೆ ಅತ್ಯಂತ ಪೂರಕವಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಕರಾವಳಿಯಲ್ಲಿ ಬಿರುಗಾಳಿಯ ವೇಗ ಗಂಟೆಗೆ 40 ರಿಂದ 50 ಕಿ.ಮೀ ಇರಲಿರುವುದರಿಂದ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ದಿನವಿಡೀ ಮೋಡಕವಿದ ವಾತಾವರಣವಿರಲಿದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ತುಂತುರು ಅಥವಾ ಸಾಧಾರಣ ಮಳೆಯಾಗುವ ಲಕ್ಷಣಗಳಿದೆ.



