ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೀತಿರೋ ಪ್ರತಿಷ್ಠಿತ ದುಲೀಪ್ ಟ್ರೋಫಿ ಫೈನಲ್ ಪಂದ್ಯ ಈಗ ಕಂಪ್ಲೀಟ್ ಆಗಿ ಒನ್ಸೈಡ್ ಗೇಮ್ ತರ ಕಾಣಿಸ್ತಿದೆ. ಸೌತ್ ಝೋನ್ ತಂಡಕ್ಕೆ ಗೆಲ್ಲೋದು ಬಿಡಿ, ಪಂದ್ಯವನ್ನು ಕಾಪಾಡಿಕೊಳ್ಳೋದು ಕೂಡ ಕಷ್ಟದ ಕೆಲಸವಾಗಿದೆ. ಈಸ್ಟ್ ಝೋನ್ ತಂಡ ಪಂದ್ಯದ ಮೇಲೆ ಪೂರ್ತಿ ಹಿಡಿತ ಸಾಧಿಸಿದ್ದು, ನಾಯಕ ಇಶಾನ್ ಕಿಶನ್ ಪಡೆ ಕಪ್ ಎತ್ತಿ ಹಿಡಿಯೋಕೆ ಜಸ್ಟ್ ಒಂದೇ ಹೆಜ್ಜೆ ಬಾಕಿ ಇದೆ.
ಪಂದ್ಯ ಏನಾದ್ರೂ ಡ್ರಾ ಆದ್ರೂ ಕೂಡ, ಫಸ್ಟ್ ಇನಿಂಗ್ಸ್ನಲ್ಲಿ ಸಿಕ್ಕಾಪಟ್ಟೆ ರನ್ ಮುನ್ನಡೆ ಪಡೆದಿರೋ ಈಸ್ಟ್ ಝೋನ್ ಟೀಮ್ಗೆನೇ ಟ್ರೋಫಿ ಸಿಗೋದು ಖಚಿತ. ಹಾಗಾಗಿ ಸೌತ್ ಝೋನ್ಗೆ ಡ್ರಾ ಆದ್ರೂ ಒಂದೇ, ಸೋತರೂ ಒಂದೇ ಅನ್ನೋ ಪರಿಸ್ಥಿತಿ ಬಂದೊದಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಈಸ್ಟ್ ಝೋನ್, ರನ್ಗಳ ಮಹಾಪೂರವನ್ನೇ ಹರಿಸಿತು. ಕ್ಯಾಪ್ಟನ್ ಇಶಾನ್ ಕಿಶನ್ 270 ರನ್ಗಳ ಬೃಹತ್ ದ್ವಿಶತಕ ಬಾರಿಸಿದ್ರೆ, ವಿಕೆಟ್ ಕೀಪರ್ ಕುಮಾರ್ ಕುಶಾಗ್ರ 101 ರನ್ ಬಾರಿಸಿ ಸಾಥ್ ಕೊಟ್ರು. ಈ ಇಬ್ಬರ ಭರ್ಜರಿ ಆಟದಿಂದ ಈಸ್ಟ್ ಝೋನ್ ತನ್ನ ಮೊದಲ ಇನಿಂಗ್ಸ್ನಲ್ಲಿ 708 ರನ್ಗಳ ಸ್ಕೋರ್ ಕಲೆಹಾಕಿತು.
ಈ ರನ್ಗಳನ್ನು ಬೆನ್ನಟ್ಟಿದ ಸೌತ್ ಝೋನ್, ಈಸ್ಟ್ ಝೋನ್ ವೇಗಿಗಳ ಖಡಕ್ ಬೌಲಿಂಗ್ಗೆ ನಡುಗಿಹೋಯ್ತು. ಆದರೆ ನಾಯಕ ತಿಲಕ್ ವರ್ಮಾ 211 ಬಾಲ್ ಎದುರಿಸಿ 99 ರನ್ ಗಳಿಸಿ ಕೊನೆವರೆಗೂ ಏಕಾಂಗಿ ಹೋರಾಟ ನಡೆಸಿದ್ರು. ಆದ್ರೆ ಬ್ಯಾಡ್ ಲಕ್ ಅಂದ್ರೆ, ಜಸ್ಟ್ 1 ರನ್ನಿಂದ ಅವರ ಸೆಂಚುರಿ ಮಿಸ್ ಆಯ್ತು. ದೇವದತ್ ಪಡಿಕ್ಕಲ್ ಗಳಿಸಿದ 62 ರನ್ ಬಿಟ್ರೆ, ಬೇರೆ ಯಾವ ಬ್ಯಾಟರ್ ಕೂಡ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ. ಪರಿಣಾಮವಾಗಿ ಸೌತ್ ಝೋನ್ ತನ್ನ ಮೊದಲ ಇನಿಂಗ್ಸ್ನಲ್ಲಿ 336 ರನ್ಗಳಿಗೆ ಆಲೌಟ್ ಆಗಿ, ಬರೋಬ್ಬರಿ 372 ರನ್ಗಳ ಬೃಹತ್ ಹಿನ್ನಡೆ ಅನುಭವಿಸಿತು.
ಫಸ್ಟ್ ಇನಿಂಗ್ಸ್ನಲ್ಲಿ 372 ರನ್ಗಳ ಲೀಡ್ ಸಿಕ್ಕರೂ ಈಸ್ಟ್ ಝೋನ್ ತಂಡ ಸೌತ್ಗೆ ಫಾಲೋ-ಆನ್ ನೀಡದೆ, ಮತ್ತೆ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಎರಡನೇ ಇನಿಂಗ್ಸ್ನಲ್ಲೂ ಬಿಡದೆ ಅಬ್ಬರಿಸಿದ ನಾಯಕ ಕಿಶನ್ 80 ರನ್ ಕಲೆಹಾಕಿದರು. ನಾಲ್ಕನೇ ದಿನದಾಟ ಮುಗಿಯುವಷ್ಟರಲ್ಲಿ ಈಸ್ಟ್ ಝೋನ್ 5 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿದ್ದು, ಒಟ್ಟು ಮುನ್ನಡೆಯನ್ನು 584 ರನ್ಗಳಿಗೆ ಏರಿಸಿಕೊಂಡಿದೆ.
ಐದನೇ ದಿನದ ಮೊದಲ ಸೆಷನ್ನಲ್ಲೂ ಈಸ್ಟ್ ಬ್ಯಾಟಿಂಗ್ ಮುಂದುವರಿಸೋ ಸೂಚನೆ ಇದ್ದು, ಲೀಡ್ 650 ರನ್ ದಾಟೋದು ಪಕ್ಕಾ. ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ನಾಲ್ಕನೇ ಇನಿಂಗ್ಸ್ನಲ್ಲಿ 650ಕ್ಕೂ ಹೆಚ್ಚು ರನ್ ಚೇಸ್ ಮಾಡಿ ಗೆದ್ದ ಇತಿಹಾಸವೇ ಇಲ್ಲ. ಹಾಗಾಗಿ ಈ ಬಾರಿ ದುಲೀಪ್ ಟ್ರೋಫಿ ಸೌತ್ ಪಡೆ ಕೈಜಾರಿ, ಈಸ್ಟ್ ಝೋನ್ ಪಾಲಾಗೋದು ಪಕ್ಕಾ ಆಗಿದೆ.



