ಹೊಸದಿಗಂತ ವರದಿ ಉಳ್ಳಾಲ:
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕೆ.ಟಿ.ಆಳ್ವ ಗುರುವಂದನಾ ಸಮಿತಿ ಪೂಪಾಡಿಕಲ್ಲು ಇವರ ಜಂಟಿ ಆಶ್ರಯದಲ್ಲಿ ಸೆ.13ರ ಭಾನುವಾರದಂದು ಮುಡಿಪು ಪೂಪಾಡಿಕಲ್ ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಹಿರಿಯ ಸಾಹಿತಿ, ನಿವೃತ್ತ ಉಪನ್ಯಾಸಕರಾದ ಕೆ.ಟಿ ಆಳ್ವ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆಯೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಹಾಸ ಕಣಂತೂರು ತಿಳಿಸಿದರು.
ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭಾನುವಾರದಂದು ನಡೆಯುವ ಗುರುವಂದನಾ ಕಾರ್ಯಕ್ರಮದಲ್ಲಿ ಕೆ.ಟಿ.ಆಳ್ವ ಅವರ ಕುರಿತು ತಾನು ರಚಿಸಿರುವ “ಗಾಂಧಿ ಸಾದಿಡ್ ನಡತ್ ಬತ್ತಿನ ಕೆ.ಟಿ.ಆಳ್ವೆರ್”ಕೃತಿಯ ಲೋಕಾರ್ಪಣೆ ಮತ್ತು ಸಾಕ್ಷ್ಯಚಿತ್ರ ಬಿಡುಗಡೆಗೊಳ್ಳಲಿದೆ.
ಆರೋಗ್ಯ ಸಚಿವರಾದ ಯು.ಟಿ.ಖಾದರ್ ಕೃತಿ ಲೋಕಾರ್ಪಣೆ ಮಾಡಲಿದ್ದು,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಲಿದ್ದಾರೆ.ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಿದ್ದು, ಕುಡ್ಲ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಕಲ್ಲೂರು ನಾಗೇಶ್ ಕೃತಿಯ ಕುರಿತು ಮಾತನಾಡಲಿದ್ದಾರೆ.ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 9.30ಕ್ಕೆ ನಾದಾ ಮಣಿನಾಲ್ಕೂರು ಅವರಿಂದ ಪದರಂಗೀತ ಹಾಗೂ ತುಳು ಗೀತ ಗಾಯನ ನಡೆಯಲಿದೆಯೆಂದರು.

ಕೆ.ಟಿ ಆಳ್ವ ಗುರುವಂದನಾ ಸಮಿತಿ ಕಾರ್ಯದರ್ಶಿ ಡಾ.ಎನ್ ಇಸ್ಮಾಯಿಲ್ ಮಾತನಾಡಿ 94ರ ಇಳಿವಯಸ್ಸಿನಲ್ಲಿಯೂ ಉತ್ಸಾಹಭರಿತ ಹಾಗೂ ಕ್ರಿಯಾಶೀಲ ಜೀವನ ನಡೆಸುತ್ತಿರುವ ಪ್ರಗತಿಪರ ಚಿಂತಕ ಕೆ.ಟಿ.ಆಳ್ವ ಅವರ ಸರಳತೆ, ಸಮಾಜಮುಖಿ ಚಿಂತನೆ ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಮಾದರಿಯಾಗಿದೆ.ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಿ ಗೌರವ ಸಲ್ಲಿಸುವ ಉದ್ಧೇಶದಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಟಿ.ಆಳ್ವ ಗುರುವಂದನಾ ಸಮಿತಿ ಗೌರವಾಧ್ಯಕ್ಷರು ಗಡಿಪ್ರದಾನರಾದ ಪದ್ಮನಾಭ ರೈ ಯಾನೆ ಮಂಜು ಭಂಡಾರಿ ಹಾಗೂ ಕಾರ್ಯಕ್ರಮ ಸಂಯೋಜಕರಾದ ಪುಂಡರೀಕಾಕ್ಷ ಕುಲಾಲ್ ಉಪಸ್ಥಿತರಿದ್ದರು.



