ಹೊಸದಿಗಂತ ವರದಿ ಕಾರವಾರ:
ರಾಷ್ಟ್ರ ಭಕ್ತಿಯನ್ನು ಬಿಂಬಿಸುವ ಗೀತೆಯಾದ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಆದೇಶವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಖಂಡಿಸಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರ ನಡೆದುಕೊಂಡಿದ್ದು, ರಾಷ್ಟ್ರಪ್ರೇಮದ ಸಂಕೇತವಾಗಿರುವ ವಂದೇ ಮಾತರಂ ಗೀತೆಯನ್ನು ತುಂಡರಿಸುವ ಮೂಲಕ ವಿಕೃತಿ ಮೆರೆದಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ:
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಈ ಗೀತೆಗೆ ತನ್ನದೇ ಆದ ಐತಿಹಾಸಿಕ ಮತ್ತು ರಾಷ್ಟ್ರೀಯ ಮಹತ್ವವಿದೆ. ಇಂತಹ ಗೀತೆಯ ಗಾಯನಕ್ಕೆ ಸರ್ಕಾರವೇ ಮಿತಿ ವಿಧಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯ ಏಕತೆಯನ್ನು ಪ್ರತಿಬಿಂಬಿಸುವ ಗೀತೆಯನ್ನು ಯಾವುದೇ ರಾಜಕೀಯ ಕಾರಣಕ್ಕಾಗಿ ವಿಭಜಿಸುವ ಪ್ರಯತ್ನ ಸಲ್ಲದು. ರಾಜ್ಯ ಸರ್ಕಾರ ತಕ್ಷಣ ತನ್ನ ಆದೇಶವನ್ನು ಹಿಂಪಡೆದು, ವಂದೇ ಮಾತರಂ ಗೀತೆಯನ್ನು ಗೌರವಯುತವಾಗಿ ಪೂರ್ಣವಾಗಿ ಹಾಡಲು ಅವಕಾಶ ಕಲ್ಪಿಸಬೇಕು ಎಂದು ರೂಪಾಲಿ ನಾಯ್ಕ ಆಗ್ರಹಿಸಿದ್ದಾರೆ.



