September 12, 2026
Saturday, September 12, 2026
spot_img

ಜೈಲಿನಲ್ಲಿ ಕದ್ದುಮುಚ್ಚಿ ಮೊಬೈಲ್ ಬಳಸುತ್ತಿದ್ದ ಪ್ರಜ್ವಲ್ ರೇವಣ್ಣ: ಫೋನ್ ಪರಿಶೀಲಿಸಿದ ಅಧಿಕಾರಿಗಳಿಗೆ ಕಾದಿತ್ತು ಬಿಗ್ ಶಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪರಪ್ಪನ ಅಗ್ರಹಾರ ಜೈಲಿನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಕ್ರಮವಾಗಿ ಮೊಬೈಲ್ ಬಳಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಶಾಕಿಂಗ್ ಸತ್ಯ ಹೊರಬಿದ್ದಿದೆ. ಅಧಿಕಾರಿಗಳು ವಶಪಡಿಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಅವರ ಮೊಬೈಲ್ ಮತ್ತು ಪೆನ್ ಡ್ರೈವ್‌ನ ವಿಧಿವಿಜ್ಞಾನ ವರದಿಯಲ್ಲಿ ಅಶ್ಲೀಲ ಹಾಗೂ ವೆಬ್ ಸಿರೀಸ್‌ಗಳು ಪತ್ತೆಯಾಗಿವೆ.

ಕಳೆದ ತಿಂಗಳು ಜೈಲಿನಲ್ಲಿ ನಡೆದ ದಿಢೀರ್ ದಾಳಿಯ ವೇಳೆ ಸಿಕ್ಕಿಬಿದ್ದಿದ್ದ ಈ ಡಿವೈಸ್‌ಗಳನ್ನು ಎಫ್‌ಎಸ್‌ಎಲ್ ತನಿಖೆಗೆ ಕಳುಹಿಸಲಾಗಿತ್ತು. ಈಗ ಅದರ ರಿಪೋರ್ಟ್ ಬಂದಿದ್ದು, ಜೈಲಿನ ಭದ್ರತಾ ವ್ಯವಸ್ಥೆಯ ಮೇಲೆ ದೊಡ್ಡ ಪ್ರಶ್ನೆ ಮಾಡಿದೆ.

ಆಗಸ್ಟ್ 11ರಂದು ಸಿಕ್ಕಿಬಿದ್ದಿದ್ದ ಪ್ರಜ್ವಲ್

ಕಳೆದ ಆಗಸ್ಟ್ 11ರಂದು ಕ್ರೈಮ್ ಬ್ರಾಂಚ್ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಹೈ-ಸೆಕ್ಯೂರಿಟಿ ಬ್ಯಾರಕ್ ಮೇಲೆ ಆಕಸ್ಮಿಕವಾಗಿ ದಾಳಿ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಜೈಲಿನ ಕೋಣೆಯಲ್ಲೇ ಮೊಬೈಲ್ ಬಳಸುತ್ತಿರುವುದು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಅಧಿಕಾರಿಗಳು ತಕ್ಷಣವೇ ಅವರ ಬಳಿಯಿದ್ದ ಸ್ಮಾರ್ಟ್‌ಫೋನ್, ಚಾರ್ಜರ್, ಒಂದು ಪೆನ್ ಡ್ರೈವ್ ಹಾಗೂ ನೋಟ್‌ಬುಕ್ ಅನ್ನು ಜಪ್ತಿ ಮಾಡಿದ್ದರು.

ಫೊರೆನ್ಸಿಕ್ ವರದಿಯಲ್ಲಿ ಏನಿದೆ?

ಅಧಿಕಾರಿಗಳು ವಶಪಡಿಸಿಕೊಂಡಿದ್ದ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಇನ್ನು ಅವರ ಬ್ಯಾರಕ್‌ನಲ್ಲಿ ಸಿಕ್ಕಿದ್ದ ಪೆನ್ ಡ್ರೈವ್‌ನಲ್ಲಿ ಸಿನಿಮಾ ಹಾಗೂ ವೆಬ್ ಸಿರೀಸ್‌ಗಳು ಪತ್ತೆಯಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಾಬೀತಾಗಿದೆ.

ಇದನ್ನೂ ಓದಿ:

ವಿಐಪಿ ಖೈದಿಗಳಿಗೆ ವಿಶೇಷ ಆತಿಥ್ಯ?

ಜೈಲಿನ ನಿಯಮಗಳ ಪ್ರಕಾರ ಯಾವುದೇ ಖೈದಿಗೆ ವೈಯಕ್ತಿಕ ಮೊಬೈಲ್, ಸಿಮ್ ಕಾರ್ಡ್ ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸಲು ಅವಕಾಶವೇ ಇರುವುದಿಲ್ಲ. ಕೇವಲ ಜೈಲಿನಲ್ಲಿರುವ ಅಧಿಕೃತ ಲ್ಯಾಂಡ್‌ಲೈನ್ ಅಥವಾ ನಿಗದಿಪಡಿಸಿದ ಸೌಲಭ್ಯಗಳ ಮೂಲಕ ಮಾತ್ರ ಮಾತನಾಡಲು ಅವಕಾಶವಿರುತ್ತದೆ. ಆದರೆ, ಪ್ರಜ್ವಲ್ ಬಳಿ ಫೋನ್ ಸಿಕ್ಕಿರುವುದು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ವಿಐಪಿ ಖೈದಿಗಳಿಗೆ ಸಿಗುತ್ತಿರುವ ವಿಶೇಷ ಸೌಲತ್ತುಗಳ ಕುರಿತು ಮತ್ತೆ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಈ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೈಲಿನ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿ, ತನಿಖೆಗೆ ಆದೇಶಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !