September 12, 2026
Saturday, September 12, 2026
spot_img

ಬೆಳಗಾವಿಯಲ್ಲಿ ಲೋಡ್ ಶೆಡ್ಡಿಂಗ್ ವಿರೋಧಿಸಿ ರಾಜ್ಯ ಹೆದ್ದಾರಿ ತಡೆದು ಬಿಜೆಪಿ, ರೈತರ ಜಂಟಿ ಪ್ರತಿಭಟನೆ

ಹೊಸದಿಗಂತ ವರದಿ ಬೆಳಗಾವಿ:

ರೈತರ ಕೃಷಿ ಚಟುವಟಿಕೆಗಳಿಗೆ ಸಮರ್ಪಕ ಹಾಗೂ ನಿಗದಿತ ಸಮಯದಲ್ಲಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಹಾಗೂ ಲೋಡ್ ಶೆಡ್ಡಿಂಗ್‌ನಿಂದ ರೈತರಿಗೆ ಉಂಟಾಗುತ್ತಿರುವ ತೊಂದರೆಯನ್ನು ಖಂಡಿಸಿ ಬಿಜೆಪಿ ಹಾಗೂ ರೈತರು ಬೆಳಗಾವಿ–ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.

ಪಂತ ಬಾಳೇಕುಂದ್ರಿ ಗ್ರಾಮದ ಪಂತ ನಗರದಲ್ಲಿರುವ ಕೆಇಬಿ ಕಚೇರಿ ಬಳಿ ಬಿಜೆಪಿ ಗ್ರಾಮೀಣ ಮಂಡಳದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ಬೃಹತ್ ಪ್ರತಿಭಟನೆಯಲ್ಲಿ ನೂರಾರು ರೈತರು-ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಮೂರು ‘ಕೋತಿಗಳಿವೆ’ ಎಂದು ವ್ಯಂಗ್ಯವಾಡಿದ ಅವರು, “ಸಿದ್ದರಾಮಯ್ಯ ಅವರಿಗೆ ಕಾಣುವುದಿಲ್ಲ, ಡಿ.ಕೆ. ಶಿವಕುಮಾರ್ ಅವರಿಗೆ ಹೇಳುವುದಿಲ್ಲ, ಇಲ್ಲಿನ ಶಾಸಕಿ ಲಕ್ಷ್ಮೀಬಾಯಿ ಇತ್ತ ನೋಡುವುದೇಇಲ್ಲ” ಎಂದು ಲೇವಡಿ ಮಾಡಿದರು. ರೈತರು ತಮ್ಮ ಹೊಲಗಳಲ್ಲಿ ಬೆಳೆ ಬೆಳೆಯಲು ಅಗತ್ಯವಿರುವಷ್ಟು ವಿದ್ಯುತ್ ಪೂರೈಕೆ ಮಾಡುವಂತೆ ಮಾತ್ರ ಒತ್ತಾಯಿಸುತ್ತಿದ್ದಾರೆ. ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹೆಸ್ಕಾಂ ಅಧಿಕಾರಿಗಳ ಮೂಲಕ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

“ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ರೈತರ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು,” ಎಂದು ಸಂಜಯ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ಬಳಿಕ ಯಲ್ಲೇಶ್ ಕೊಲಕಾರ ಮಾತನಾಡಿ, ಹೆಸ್ಕಾಂ ಅಧಿಕಾರಿಗಳು ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತರ ಪ್ರಮುಖ ಬೇಡಿಕೆಗಳು

ರೈತರಿಗೆ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು.
ತುರ್ತು ಪರಿಸ್ಥಿತಿಯಲ್ಲಿ ವಿದ್ಯುತ್ ಕಡಿತಗೊಳಿಸುವ ಮೊದಲು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.
ಹಾಳಾದ ಟ್ರಾನ್ಸ್‌ಫಾರ್ಮರ್, ವಿದ್ಯುತ್ ಕಂಬ ಹಾಗೂ ತಂತಿಗಳನ್ನು ತ್ವರಿತವಾಗಿ ದುರಸ್ತಿ ಮಾಡಬೇಕು.
ನಿಗದಿತ ವೇಳೆಯಲ್ಲಿ ಸಮರ್ಪಕ ವೋಲ್ಟೇಜ್‌ನೊಂದಿಗೆ ವಿದ್ಯುತ್ ಪೂರೈಸಬೇಕು.
ಗಣೇಶೋತ್ಸವದ ಸಂದರ್ಭದಲ್ಲಿ ಅನಗತ್ಯ ವಿದ್ಯುತ್ ಕಡಿತ ಮಾಡಬಾರದು.
ವಿದ್ಯುತ್ ಪೂರೈಕೆಯ ನಿಗದಿತ ವೇಳಾಪಟ್ಟಿಯನ್ನು ರೈತರು ಹಾಗೂ ಸಾರ್ವಜನಿಕರಿಗೆ ಮುಂಚಿತವಾಗಿ ತಿಳಿಸಬೇಕು.
ರೈತರಿಗೆ ಅನುಕೂಲವಾಗುವಂತೆ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವೇಳೆ ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಯುವರಾಜ ಜಾಧವ, ಮಾಜಿ ಶಾಸಕ ಸಂಜಯ್ ಪಾಟೀಲ, ಧನಂಜಯ್ ಜಾದವ್, ಯಲ್ಲೇಶ್ ಕೊಲಕಾರ, ಮಂಜು ಪಾಟೀಲ, ನಿತಿನ್ ಚೌಗಲೆ ಸೇರಿದಂತೆ ರೈತ ಮುಖಂಡರು, ಬಿಜೆಪಿ ಕಾರ್ಯಕರ್ತರು ಹಾಗೂ ಪಂತ ಬಾಳೇಕುಂದ್ರಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !