ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೇ ಸೆ. 18 ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಕುರಿತು ಕರಾವಳಿಯ ಸಂಸದರು ಹಾಗೂ ಶಾಸಕರನ್ನು ಒಳಗೊಂಡ ಬಿಜೆಪಿಯ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಿತು.
ಈ ಸಂದರ್ಭ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಅವುಗಳೆಂದರೆ:
- ತುಳು ಭಾಷೆಗೆ ಕರ್ನಾಟಕದಲ್ಲಿ ಎರಡನೇ ಭಾಷೆಯಾಗಿ ಮಾನ್ಯತೆ ನೀಡಬೇಕು.
- ವ್ಯಸನ ಮುಕ್ತ ಕರಾವಳಿ ಜಿಲ್ಲೆಗೆ ವಿಶೇಷ ಟಾಸ್ಕ್ ಫೋರ್ಸ್(ಕಾರ್ಯಪಡೆ) ರಚನೆ ಮಾಡಬೇಕು.
- ಕರಾವಳಿ ಪ್ರದೇಶವು ಪ್ರಮುಖಇತಿಹಾಸ ಪ್ರಸಿದ್ಧ ದೇವಾಲಯಗಳು, ದೈವಸ್ಥಾನಗಳನ್ನು ಹೊಂದಿದ್ದು ತುಳುನಾಡಿನ ಸಾಂಸ್ಕೃತಿಕ ಪರಂಪರೆಯಾದ ಈ ಪ್ರಮುಖ ಕ್ಷೇತ್ರಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಶ್ರೀ ಸುಬ್ರಮಣ್ಯಕ್ಷೇತ್ರ, ಉಡುಪಿ ಶೀ ಕೃಷ್ಣ ಮಠ, ಕೊಲ್ಲೂರು, ಶ್ರೀ ಮೂಕಾಂಬಿಕಾ ದೇವಸ್ಥಾನ, ಕಾಪು ಶ್ರೀಮಾರಿಯಮ್ಮ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಲ್ಲದೇ ನೆರೆಯ ಶೃಂಗೇರಿ ಹಾಗೂ ಹೊರನಾಡು ಕ್ಷೇತ್ರಗಳಿಗೂ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದು ಈ ಪ್ರಾಚೀನ ಪರಂಪರೆಯ ತಾಣಗಳನ್ನು ಸಂಪರ್ಕಿಸಲು, ಸಂಪರ್ಕರಸ್ತೆ ನಿರ್ಮಿಸಲು, ಪ್ರವಾಸಿಗಳನ್ನು ಆಕರ್ಷಿಸಲು ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಟೆಂಪಲ್ ಟೂರಿಸಂಗೆ ವಿಶೇಷ ಪ್ಯಾಕೇಜ್ ಮತ್ತು ಕರಾವಳಿಯಲ್ಲಿ ವ್ಯಸನ ಮುಕ್ತ ಪ್ರವಾಸೋದ್ಯಮಕ್ಕೆ ಅವಕಾಶ ನಿರ್ಮಿಸಲು ಕೋರಿಕೆ.
- ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಜನವಸತಿ ಪ್ರದೇಶವನ್ನು ಹೊರತು ಪಡಿಸಿ ಕೃಷಿ ಭೂಮಿ ಹೊರತು ಪಡಿಸಿ 0(ಜೀರೋ)ಬಫರ್‌ಜೊನ್ ಗಡಿ ಗುರುತು ಮಾಡುವುದು.
- ಐ.ಟಿ. ಪಾರ್ಕ್ ಘೋಷಣೆ – ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಟಿಯಾಗುವ ಐಟಿಬಿಟಿ ಮತ್ತು ಗ್ರಾಮೋದ್ಯೋಗ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳನ್ನು ಸ್ಥಾಪಿಸಲು ಉತ್ತೇಜಿಸುವ ಯೋಜನೆಗಳನ್ನು ಪ್ರತೀ ವಿದಾನಸಭಾ ಕ್ಷೇತ್ರಕ್ಕೆ ಘೋಷಿಸಬೇಕು.
- ಉಳ್ಳಾಲದ ಕಡಲ ಕೊರೆತವನ್ನು ತಡೆಹಿಡಿಯಲು ಶಾಶ್ವತ ಪರಿಹಾರಕ್ಕಾಗಿ ವಿಶೇಷ ಅನುದಾನ ನೀಡಬೇಕಾಗಿ ಕೋರಿಕೆ. (ಬ್ರೇಕ್ ವಾಟರ್ ಮಾದರಿಯಲ್ಲಿ).
- ಉಳ್ಳಾಲ ಸಮುದ್ರದಲ್ಲಿ ಮೀನುಗಾರಿಕಾ ಜಟ್ಟಿ ನಿರ್ಮಾಣ (ಹೊಸಬೆಟ್ಟಿನ ಮಾದರಿಯಲ್ಲಿ). ಉಳ್ಳಾಲ ಉಳಿಯ ನೇತ್ರಾವತಿ ನದಿಗೆ ಡಾಕ್ ನಿರ್ಮಿಸಿ ಬೋಟ್‌ಗೆ ಲಂಗರು ಸ್ಥಳಾವಕಾಶಕ್ಕೆ ಕೋರಿಕೆ.
- ಮಂಗಳೂರು ಅಳಿವೆ ಬಾಗಿಲು ಮತ್ತು ನೇತ್ರಾವತಿ ನದಿ ಹಾಗೂ ಗುರುಪುರ ನದಿಯಲ್ಲಿ ತುರ್ತು ಡ್ರಜ್ಜಿಂಗ್ ಮಾಡಿ ಬೋಟ್ ಮತ್ತು ನಾಡದೋಣಿ ಸುಗಮ ಸಂಚಾರ ಮಾಡಬೇಕಾಗಿದೆ. ಸಮುದ್ರದಲ್ಲಿ ಮೀನುಗಾರಿಕೆಯಲ್ಲಿರುವಾಗ ತುರ್ತು ಸಂದರ್ಭದಲ್ಲಿ ಪರಿಹಾರಕ್ಕೆ ಸೀ ಆಂಬುಲೆನ್ಸ್ಇನ್ನೂ ಕೂಡ ಚಾಲನೆಗೆ ಬರಲಿಲ್ಲ. ನಾಡದೋಣಿ ಇಂಜಿನಿಗೆ ಉಪಯೋಗಿಸುವ ಸೀಮೆಎಣ್ಣೆಯನ್ನು ಪಡಿತರ ರೀತಿಯಲ್ಲಿ ಕೈ ಎಟುಕುವ ದರದಲ್ಲಿ ನೀಡಬೇಕು. ಶೂನ್ಯ ಬಡ್ಡಿಯಲ್ಲಿ ಮೀನುಗಾರರ ಮಹಿಳೆಯರಿಗೆ ಮೀನು ಉದ್ಯಮಕ್ಕೆ ಸಾಲ. ಸರಕಾರ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಶೂನ್ಯ ಶೇಖಡದಲ್ಲಿ ಮಹಿಳೆಯರಿಗೆ 3 ಲಕ್ಷ ಸಾಲ ಘೋಷಣೆ ಮಾಡಿರುವುದು ಆದರೆ ಸರಕಾರವು ಅದಕ್ಕೆ
ಬೇಕಾದ ಸಬ್ಸಿಡಿ ಅನುದಾನ ನೀಡದಕಾರಣ ಮಹಿಳೆಯರಿಗೆ ಬ್ಯಾಂಕ್‌ನಲ್ಲಿ ಈ ಸಾಲ ಸೌಲಭ್ಯ ದೊರೆಯುತ್ತಿಲ್ಲ. - ವಸತಿ ರಹಿತ ಕುಟುಂಬಗಳಿಗೆ ವಸತಿಯೋಜನೆಯಲ್ಲಿ ಮನೆ ನಿವೇಶನ ಒದಗಿಸುವುದು. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರಿಗೆ ವಿಶೇಷ ಅನುದಾನ ಒದಗಿಸುವುದು.
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಕ್ಕುಪತ್ರವನ್ನು ಪಡಕೊಂಡಿರುವ ಫಲಾನುಭವಿಗಳಿಗೆ ಮನೆ ಕಟ್ಟಲುಏಕ ನಿವೇಶನ (ಸಿಂಗಲ್ ಸೈಟ್)ನಿಂದ ವಿನಾಯಿತಿ ನೀಡಬೇಕು ಮತ್ತು ಪಂಚಾಯತ್ ನಿಂದ ಪರವಾನಿಗೆ ನೀಡಲುಕ್ರಮ ಕೈಗೊಳ್ಳಬೇಕು.
- ಮಂಗಳೂರಿನ ಸರಕಾರಿ ವೆನ್‌ಲಾಕ್ ಆಸ್ಪತ್ರೆಗೆ ರಾಜ್ಯದ ಮೂಲೆ ಮೂಲೆಯಿಂದ ರೋಗಿಗಳು ನಿರಂತರವಾಗಿ ಬರುತ್ತಿದ್ದು ಹಾಗೂ ನೆರೆಯ ಕೇರಳದಿಂದ ಕೂಡ ರೋಗಿಗಳು ಬರುತ್ತಿದ್ದು ಅಲ್ಲಿರುವ ತೀವ್ರ ನಿಗಾ ಘಟಕವನ್ನು (ಐ.ಸಿ.ಯು) ಹೆಚ್ಚಿಸಿ ಕನಿಷ್ಠ 250 ಐ.ಸಿ.ಯು ಬೆಡ್ ನಿರ್ಮಾಣ ಮಾಡುವಂತೆ ಕೋರಿಕೆ.
- ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸರಕಾರಿ ಭೂಮಿಯಲ್ಲಿರುವ ದೈವ, ದೇವಸ್ಥಾನದ ಭೂಮಿಯನ್ನು ಅಕ್ರಮಸಕ್ರಮದ ಅಡಿಯಲ್ಲಿ ಸಕ್ರಮಗೊಳಿಸಿ ದಾಖಲೆಯನ್ನು ನೀಡುವುದು.
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಒಂದು ಲೋಡ್ ಮರಳಿಗೆ ರೂ 8,000 ಕ್ಕೆ ಸುಲಭವಾಗಿ ದೊರೆಯುತ್ತಿತ್ತು ಈಗ ದರ ವಿಪರೀತ ಏರಿಕೆಯಾಗಿರೂ. 25,000 ದಿಂದರೂ. 30,000 ಕ್ಕೆ ಆಗಿದೆ. ಇದರಿಂದ ಬಡ ಕಟ್ಟಡ ಕಾರ್ಮಿಕರು,ಗುತ್ತಿಗೆದಾರರು ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು ಮರಳಿನ ದರವನ್ನು ಈ ಹಿಂದೆ ಸಿಗುವಂತೆ ಪರವಾನಿಗೆಯನ್ನು ಸರಳೀಕರಣಗೊಳಿಸಿ ಕ್ರಮ ಕೈಗೊಳ್ಳಬೇಕು.
- ಮನೆ ನಿರ್ಮಾಣಕ್ಕೆ ಉಪಯೋಗಿಸುವ ಒಂದು ಕೆಂಪು ಕಲ್ಲಿನ ದರವು ರೂ. 25 ರಿಂದ ಇತ್ತೀಚೆಗೆ ರೂ. 50 ಕ್ಕೆ ಏರಿಕೆಯಾಗಿದ್ದು ಇದರಿಂದ ಬಡವರಿಗೆ ಮನೆ ಕಟ್ಟಲು ತುಂಬಾ ತೊಂದರೆಯಾದ ಕಾರಣ ಕೆಂಪು ಕಲ್ಲು ಹಿಂದಿನ ದರದಲ್ಲಿ ಸಿಗುವಂತೆ ಕೆಂಪು ಕಲ್ಲಿನ ಪರವಾನಿಗೆಯನ್ನು ಸರಳೀಕರಿಸುವುದು.
- ಕುಮ್ಕಿ ಜಮೀನನ್ನು ಸಕ್ರಮಗೊಳಿಸುವುದು.
- ಎಲ್ಲಾ ತಾಲೂಕುಗಳಲ್ಲಿ ಕೈಗಾರಿಕಾ ವಲಯ ಅನುಷ್ಠಾನಕ್ಕೆ ಕನಿಷ್ಠ ತಲಾ 100 ಎಕರೆ ಸರಕಾರಿ ಜಮೀನು ಕಾಯ್ದಿರಿಸಲು ಆದೇಶ ಜಾರಿ.
- ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ, ಒಳಚರಂಡಿ,ಸೇತುವೆ, ಮತ್ತು ಸಂಪರ್ಕ ರಸ್ತೆಗಳು ಸಂಪೂರ್ಣ ಹಾಳಾಗಿ ಗುಂಡಿಗಳಿಂದ ಕೂಡಿದ್ದು ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ರೂಪಾಯಿ 1,000 ಕೋಟಿ ವಿಶೇಷ ಅನುದಾನ ನೀಡಲುಕೋರಿಕೆ.
- ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಸುತ್ತ ಮುತ್ತ ವಿಪರೀತ ವಾಹನ ದಟ್ಟಣೆಯಿಂದ ರಸ್ತೆ ಸಂಫೂರ್ಣ ಹಾಳಾಗಿದ್ದು ವಾಹನ ಸಂಚಾರಕ್ಕೆ ಅನಾನುಕೂಲವಾಗಿದ್ದು ನಗರ ಪ್ರದೇಶದಲ್ಲಿ ಅನೇಕ ಒಳಚರಂಡಿ, ಸಂಪರ್ಕರಸ್ತೆ, ತ್ಯಾಜ ವಿಲೇವಾರಿ, ಸಾರ್ವಜನಿಕ ಶೌಚಾಲಯ ಹಾಗೂ ಇನ್ನಿತ್ತರ ಅಭಿವೃದ್ದಿಗೆ ಪ್ರತ್ಯೇಕವಾಗಿ ವಿಶೇಷ ಅನುದಾನ ನೀಡಬೇಕಾಗಿ ಕೋರಿಕೆ.
- ಆಕ್ರಮ ಸಕ್ರಮದಲ್ಲಿರುವ ಅರ್ಜಿಗಳನ್ನು ತ್ವರಿತವಾಗಿ ಮತ್ತು ನಗರಾಡಳಿತ ವ್ಯಾಪ್ತಿಯ ನಿರ್ಬಂಧಗಳನ್ನು ತೆಗೆದುಹಾಕಿ ಶೀಘ್ರ ವಿಲೇವಾರಿ ಮಾಡುವಂತೆ ಕೋರಿಕೆ.
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರ ನೇಮಕ ಮತ್ತು ಮೂಲಭೂತ ಸೌಕರ್ಯ ಒದಗಿಸುವುದು. ಹಾಗೂ ಸಿಬ್ಬಂದಿಗಳ ನೇಮಕಕ್ಕೆ ಕ್ರಮ ಕೈಗೊಳ್ಳುವುದು.
- ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಬೆಳ್ತಂಗಡಿ, ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ ಕಾಡಾನೆಗಳ ದಾಳಿ ತಡೆಯಲು ಆನೆ ಕಂದಕ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್ ನೀಡಲುಕೋರಿಕೆ.
- ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಕಡಿಮೆ ಮಾಡಲು, ತ್ಯಾಜ್ಯದಿಂದ ಮರುಬಳಕೆ ಉತ್ಪನ್ನಗಳ ತಯಾರಿಕೆಗೆ ಪ್ರತೀ ತಾಲೂಕುಗಳಲ್ಲಿ ಮರುತ್ಯಾಜ್ಯಘಟಕ ಸ್ಥಾಪಿಸಲು ಯೋಜನೆ ಮಾಡುವುದು.
- ಜಿಲ್ಲೆಯ ಹೊಸ ತಾಲೂಕುಗಳಿಗೆ ಎಲ್ಲಾ ಇಲಾಖೆಗಳು ಖಾಯಂ ಆಗಿ ಕಾರ್ಯ ನಿರ್ವಹಿಸುವಂತೆ ಶೀಘ್ರ ಕ್ರಮ ಹಾಗೂ ಪೂರ್ಣಕಾಲಿಕ ಅಧಿಕಾರಿ, ಸಿಬ್ಬಂದಿಗಳ ನೇಮಕ.
- ಯುವಜನರ ಭವಿಷ್ಯದೃಷ್ಟಿಯಿಂದ ಆಡಳಿತ ಸೇವೆ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳು, ದೇಶದ ವಿವಿಧ ಇಲಾಖೆಗಳಲ್ಲಿ ಉದ್ಯೋಗದ ಅವಕಾಶಕ್ಕಾಗಿ ತಯಾರಿಗೊಳಿಸುವ ತರಬೇತಿ ಕೇಂದ್ರಗಳನ್ನು ಪ್ರತೀ ತಾಲೂಕು ಕೇಂದ್ರಗಳಲ್ಲಿ ಸ್ಥಾಪನೆಗೆ ಅನುದಾನ ಒದಗಿಸಲು ಕೋರಿಕೆ.
- ಜಿಲ್ಲೆಯಲ್ಲಿ ಈಗಾಗಲೇ ಕುಂಠಿತ ಗೊಂಡಿರುವ ಜಲಸಿರಿ ಯೋಜನೆಯಡಿಯಲ್ಲಿ ಮನೆ ಮನೆಗೆ ಕುಡಿಯುವ ಶುದ್ಧ ನೀರಿನ ಯೋಜನೆಯನ್ನು ಶೀಘ್ರದಲ್ಲಿ ಅನುಷ್ಠಾನ ಮಾಡಬೇಕು.
- ಜಿಲ್ಲಾರಂಗಮಂದಿರ ನಿರ್ಮಾಣಕ್ಕೆ ಈ ಹಿಂದೆ ಒದಗಿಸಿದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲು ಕೋರಿಕೆ.
- ದಕ್ಷಿಣ ಕನ್ನಡಜಿಲ್ಲೆಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣಕ್ಕಾಗಿ ಸ್ಥಳ ಕಾದಿರಿಸುವಿಕೆ ಹಾಗೂ ನಿರ್ಮಾಣಕ್ಕೆ ಅನುದಾನ ಕೋರಿಕೆ.
- ಕರಾವಳಿ ಜಿಲ್ಲೆಯಲ್ಲಿ 9-11/A-B ಯಿಂದ ಪೂರ್ತಿ ವಿನಾಯಿತಿ ನೀಡುವಂತೆ ಕೋರಿಕೆ.
- ಯುವ ಕ್ರೀಡಾಪಟುಗಳಿಗೆ ತರಬೇತಿ ಅಭ್ಯಾಸಕ್ಕೆ ಪೂರಕವಾಗುವಂತೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಕ್ರೀಡಾಂಗಣ, ಸಕಲ ವ್ಯವಸ್ಥೆಗಳು, ತರಬೇತುದಾರರ ನೇಮಕ ಹಾಗೂ ಕ್ರೀಡಾ ಹಾಸ್ಟೆಲ್ ನಿರ್ಮಾಣಕ್ಕೆ ಪ್ರತಿ ತಾಲೂಕುಗಳಿಗೆ ಯೋಜನೆ ಹಾಗೂ ಅನುದಾನ ನೀಡಲುಕೋರಿಕೆ.
- ತುಳುನಾಡಿನ ಕಲೆಯಾದ ನಾಟಕ, ತುಳು ಚಲನಚಿತ್ರಕ್ಕೆ ವಿಶೇಷ ಪ್ರೋತ್ಸಾಹಧನ ನೀಡಲು ಕೋರಿಕೆ.ಹಾಗೂ ಯಕ್ಷಗಾನ ಮೇಳಗಳು ಹಾಗೂ ತುಳು ನಾಟಕ ತಂಡಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಲು ಒತ್ತಾಯ.
- ಯಕ್ಷಗಾನವು ಕರಾವಳಿ ಕರ್ನಾಟಕದ ಗಂಡುಕಲೆಯಾಗಿದ್ದು ಈ ಕಲೆಯನ್ನು ಪ್ರೋತ್ಸಾಹಿಸಲು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸಲು ಹೆಚ್ಚಿನ ಅನುದಾನ ಹಾಗೂ ಪ್ರೋತ್ಸಾಹವನ್ನು ರಾಜ್ಯ ಸರಕಾರ ನೀಡಬೇಕು ಹಾಗೂ ಈಗ ನಡೆಯುತ್ತಿರುವ ಯಕ್ಷಗಾನ ಪ್ರದರ್ಶನಕ್ಕೆ ಮಧ್ಯರಾತ್ರಿಯವರೆಗೆ ಅನುಮತಿಯಿದ್ದು ಅದನ್ನು ಈ ಹಿಂದಿನಂತೆಯೇ ಬೆಳಿಗ್ಗಿನವರೆಗೆ ಪ್ರದರ್ಶಿಸಲು ಅನುಮತಿ ನೀಡಬೇಕು.
- ಕಂಬಳವು ತುಳು ನಾಡಿನ ಜಾನಪದ ಕ್ರೀಡೆಯಾಗಿದ್ದು ಈ ಜಾನಪದ ಕ್ರೀಡೆಗೆ ಪೋತ್ಸಾಹಿಸುವ ನಿಟ್ಟಿನಲ್ಲಿ ಪ್ರತೀ ಕಂಬಳಕ್ಕೆರೂಪಾಯಿ10 ಲಕ್ಷ ಅನುದಾನ ನೀಡಬೇಕು.
- ಪೋರ್ಚುಗೀಸರ ವಿರುದ್ಧ ಹೋರಾಟ ಮಾಡಿದ ತುಳುನಾಡಿನ ದಿಟ್ಟ ಮಹಿಳೆ ರಾಣಿ ಅಬ್ಬಕ್ಕಳ ಉತ್ಸವಕ್ಕೆ ಕನಿಷ್ಠ ಒಂದು ಕೋಟಿ ಅನುದಾನ ನೀಡಲು ಕೋರಿಕೆ.
- ರಾಜ್ಯದಲ್ಲಿ ಕರಾವಳಿ ಭಾಗಕ್ಕೆ ಸಂಬಂಧಿಸಿದಂತೆ ಸರಕಾರ ಈ ಹಿಂದೆ ಘೋಷಣೆ ಮಾಡಿರುವ ನಿಗಮ ಮಂಡಳಿ ಮತ್ತು ಇತ್ತೀಚಿಗೆ ರಚನೆಯಾಗಿರುವ ವಿಶೇಷವಾಗಿ ನಾರಾಯಣಗುರು ನಿಗಮ, ಬಂಟರ ನಿಗಮ, ಅರೆ ಒಕ್ಕಳಿಗ ನಿಗಮಗಳಿಗೆ ನಿಗದಿಪಡಿಸಿದ ಅನುದಾನತಕ್ಷಣ ಬಿಡುಗಡೆ ಮಾಡುವಂತೆ ಕೋರಿಕೆ.
- ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯನ್ನು ವಿಭಾಗೀಯ ಆಸ್ಪತ್ರೆ ಮಾಡಲು ಅನುಮತಿ ಮತ್ತು ಪ್ರತ್ಯೇಕ 50 ಎಕ್ರೆ ಭೂಮಿಯನ್ನು ಗ್ರಾಮೀಣ ಪ್ರದೇಶಗಳಿಗೆ ಮೀಸಲಿರಿಸಿ ಸರಕಾರಿ ವೈದ್ಯಕೀಯ ಕಾಲೇಜ್ ಪ್ರಾರಂಭಿಸಬೇಕು.
- ಬಾಕಿ ಇರುವ ವಿಧವಾ ವೇತನ, ವೃದಾಪ್ಯ ವೇತನ ಮತ್ತು ವಿಕಲಚೇತನರ ವೇತನವನ್ನು ತಕ್ಷಣ ಈ ಹಿಂದಿನಂತೆ ಬಿಡುಗಡೆ ಮಾಡಬೇಕಾಗಿ ವಿನಂತಿ.
- ಕರಾವಳಿ ಅಭಿವೃಧ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆಯಾಗುವುದರಿಂದ ಅತಿವೃಷ್ಟಿಯ ಕಾರಣ ಸಾಕಷ್ಟು ತೊಂದರೆಯಾಗುತ್ತಿದ್ದು ಈ ಬಗ್ಗೆ ಅಧ್ಯಯನ ಮಾಡಿ ಕರಾವಳಿಯ ವಿದಾನಸಭಾ ಕ್ಷೇತ್ರವಾರು ಪ್ರತೀ ವರ್ಷ ಅನುದಾನ ಒದಗಿಸಲುಕ್ರಮ ಕೈಗೊಳ್ಳಬೇಕು.
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಡಿ.ಸಿ. ಮನ್ನಜಾಗವನ್ನು ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಕುಟುಂಬಗಳಿಗೆ ಕೃಷಿ ಮಾಡಲು ಮಂಜೂರಾತಿ ಮಾಡಲು ಅವಕಾಶ ನೀಡಬೇಕು.
- ಅರಣ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಬಂದುಗಳಿಗೆ ಕೃಷಿಗೆ/ ವಸತಿಗೆ ಹಕ್ಕು ಪತ್ರವನ್ನು ನೀಡಲುಕ್ರಮ ಕೈಗೊಳ್ಳಬೇಕು.
- ನೀತಿ ಆಯೋಗದ ಶಿಫಾರಿಸ್ಸಿನಂತೆ ಮಂಗಳೂರನ್ನು ರಾಜ್ಯದ ಎರಡನೇ ಪ್ರಮುಖ ನಗರವನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳಬೇಕು.
- 94 ಸಿ , 94 ಸಿ.ಸಿ ಹೊಸ ಅರ್ಜಿಯನ್ನು ಪಡೆಯುಲು ಕ್ರಮಕೈಗೊಳ್ಳಬೇಕು.
- ಅಕ್ರಮ ಗೋವುಸಾಗಾಟ ಮತ್ತು ಗೋಹತ್ಯೆಯನ್ನು ತಡೆಹಿಡಿಯಲು ಟಾಸ್ಕ್ ಫೋರ್ಸ್ ರಚಿಸಲು ಆಗ್ರಹ.
- ಸ್ವದೇಶಿ ಗೋವುಗಳಿಗೆ ಗೋವು ಉತ್ಪನ್ನಕ್ಕೆ ಪ್ರೋತ್ಸಾಹ ನೀಡಲು ಗೋವು ನಿಗಮವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವುದು.
- ಕರ್ನಾಟಕ ಗೇರು ಅಭಿವೃದ್ಧಿ ನಿಗಮದಿಂದ ಲೀಸ್‌ಗೆ ನೀಡಿದ ಜಮೀನನ್ನು ರೈತರಿಗೆ ನೀಡುವಂತೆ ಕ್ರಮ ಕೈಗೊಳ್ಳಬೇಕು. ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಡಾ. ಭರತ್ ಶೆಟ್ಟಿ, ಹರೀಶ್ ಪೂಂಜ, ವೇದವ್ಯಾಸ್ ಕಾಮತ್, ಕಿಶೋರ್ ಕುಮಾರ್ ಪುತ್ತೂರು, ಭಾಗೀರಥಿ ಮುರುಳ್ಯ, ಹಾಗೂ ಇದೇ ಸಂದರ್ಭದಲ್ಲಿ ಜಿಲ್ಲೆಯ ಶಾಸಕರಾದ ಅಶೋಕ್ ರೈ, ಐವನ್ ಡಿಸೋಜ, ಮಂಜುನಾಥ್ ಭಂಡಾರಿ ಉಪಸ್ಥಿತಿತರಿದ್ದರು.



