ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸದಸ್ಯ ರಾಷ್ಟ್ರಗಳ ನಾಯಕರು ಶನಿವಾರ ನವದೆಹಲಿಯ ಭಾರತ್ ಮಂಟಪದ ಹೊರಭಾಗದಲ್ಲಿ ಜಂಟಿಯಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಸಂದೇಶ ಸಾರಿದ ಈ ಕಾರ್ಯಕ್ರಮದ ಬಳಿಕ ನಾಯಕರು ಒಟ್ಟಾಗಿ ಫೋಟೋಗೆ ಪೋಸ್ ನೀಡಿದರು.
ಭಾರತ್ ಮಂಟಪದ ಆವರಣದಲ್ಲಿ ಸಸಿನೆಟ್ಟ ನಾಯಕರು
ಎರಡು ದಿನಗಳ ಶೃಂಗಸಭೆಯ ಮೊದಲ ದಿನ ನಡೆದ ಈ ಕಾರ್ಯಕ್ರಮದಲ್ಲಿ BRICS ರಾಷ್ಟ್ರಗಳ ಪ್ರಮುಖ ನಾಯಕರು ಭಾಗವಹಿಸಿದ್ದರು. ಭಾರತ್ ಮಂಟಪದ ಆವರಣದಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮವು ಶೃಂಗಸಭೆಯ ಅಧಿಕೃತ ಚಟುವಟಿಕೆಗಳ ಭಾಗವಾಗಿತ್ತು. ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಸಂದೇಶವನ್ನು ಈ ಕಾರ್ಯಕ್ರಮ ಪ್ರತಿನಿಧಿಸಿದೆ.
ಶೃಂಗಸಭೆಯಲ್ಲಿ ಜಾಗತಿಕ ಆಡಳಿತ ಸುಧಾರಣೆ, ಆರ್ಥಿಕ ಸಹಕಾರ, ಶಾಂತಿ ಮತ್ತು ಭದ್ರತೆ, ಸುಸ್ಥಿರ ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದೆ. ‘ರಿಸಿಲಿಯನ್ಸ್, ಇನ್ನೋವೇಷನ್ ಮತ್ತು ಕೋಆಪರೇಷನ್’ ಸೇರಿದಂತೆ ಹಲವು ಆದ್ಯತೆಗಳ ಮೇಲೆ ಗಮನಹರಿಸಿದೆ.
ಪಶ್ಚಿಮ ಏಷ್ಯಾ ಸಂಘರ್ಷ ಸೇರಿದಂತೆ ಕೆಲವು ಜಾಗತಿಕ ವಿಚಾರಗಳಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಪರಸ್ಪರ ಸಹಕಾರ ಮತ್ತು ಸಂವಾದದ ಮೂಲಕ ಸಾಮಾನ್ಯ ನಿಲುವು ರೂಪಿಸುವ ಪ್ರಯತ್ನ ನಡೆಯುತ್ತಿದೆ.



