September 14, 2026
Monday, September 14, 2026
spot_img

WEATHER | ಬಿಸಿಲಿನ ನಡುವೆ ಸಿಹಿ ಸುದ್ದಿ: ಸೆಪ್ಟೆಂಬರ್ 15ರಿಂದ ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಸದ್ಯಕ್ಕೆ ಬಿಸಿಲು ಮತ್ತು ಮೋಡಗಳ ನಡುವೆ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿದ್ದು, ಸೆಪ್ಟೆಂಬರ್ ಮಧ್ಯಭಾಗದಿಂದ ಹವಾಮಾನದ ಚಿತ್ರಣವೇ ಸಂಪೂರ್ಣ ಬದಲಾಗಲಿದೆ. ಶ್ರೀಲಂಕಾದ ದಕ್ಷಿಣ ಕರಾವಳಿ ಭಾಗದಲ್ಲಿ ಸೆ. 14 ರಂದು ತಲೆದೋರಲಿರುವ ಪ್ರಬಲ ವಾಯುಭಾರ ಕುಸಿತವು, ಬಂಗಾಳಕೊಲ್ಲಿಯ ಮಾರುತಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ವರುಣ ದೇವ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ

ಮೈಸೂರು ಮತ್ತು ಮಂಡ್ಯ ಭಾಗದಲ್ಲಿ ಸದ್ಯಕ್ಕೆ ಸಂಜೆಯಾಗುತ್ತಿದ್ದಂತೆ ಅಲ್ಲಲ್ಲಿ ಗುಡುಗಿನ ಸದ್ದು ಕೇಳಿಸಲಿದೆ. ಆದರೆ, ಅಸಲಿ ಆಟ ಸೆಪ್ಟೆಂಬರ್ 15 ಮತ್ತು 16 ರಿಂದ ಶುರುವಾಗಲಿದೆ. ಈ ಭಾಗದ ಜಿಲ್ಲೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮನೆಯಿಂದ ಹೊರಡುವ ಮುನ್ನ ಮುನ್ನೆಚ್ಚರಿಕೆ ವಹಿಸುವುದು ಒಳಿತು ಎಂದು ಇಲಾಖೆ ಎಚ್ಚರಿಸಿದೆ.

ಕರಾವಳಿ- ಮಲೆನಾಡು ಬಿಸಿಲು ಮಳೆಯ ಕಣ್ಣಾಮುಚ್ಚಾಲೆ

ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಸದ್ಯಕ್ಕೆ ಸೆಖೆ ಮತ್ತು ಬಿಸಿಲಿನ ಪ್ರಖರತೆ ಹೆಚ್ಚಿರಲಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಬಿಸಿಲಿನ ನಡುವೆಯೇ ಕೆಲವೆಡೆ ಮೋಡ ಕವಿದ ವಾತಾವರಣವಿದೆ. ಆದರೆ ಸೆ. 17 ಹಾಗೂ 18 ರ ನಂತರ ಕರಾವಳಿ ತೀರದ ಪ್ರದೇಶಗಳಲ್ಲಿ ಮಳೆರಾಯನ ಆರ್ಭಟ ಸುರುವಾಗಲಿದೆ ಎಂದು ಮುನ್ಸೂಚನೆ ಸಿಕ್ಕಿದೆ.

ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ

ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸದ್ಯಕ್ಕೆ ಅಲ್ಲಲ್ಲಿ  ಸಾಧಾರಣ ಮಳೆಯಾಹುತ್ತಿದ್ದು, ಸೆ. 19 ರ ನಂತರ ಇಲ್ಲಿ ಮಳೆಯ ಮತ್ತಷ್ಟು ವಿಸ್ತರಿಸಲಿದೆ. ಇದರ ನಡುವೆ ಒಡಿಸ್ಸಾ ಹಾಗೂ ಆಂಧ್ರ ಭಾಗದ ವಾಯುಭಾರ ಕುಸಿತವು ಮಧ್ಯಪ್ರದೇಶ ದಾಟಿ ಮಹಾರಾಷ್ಟ್ರದತ್ತ ಸಾಗುತ್ತಿರುವುದರಿಂದ, ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಉತ್ತರ ಒಳನಾಡಿನ ಹಳ್ಳಿಗಳಲ್ಲಿ ಅನಿರೀಕ್ಷಿತ ಮಳೆ ಸುರಿಯುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !