ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದೆ.
ಈ ಬಾರಿ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ ಹಾಗೂ ಪುತ್ತೂರು ಉಪವಿಭಾಗಗಳ ವ್ಯಾಪ್ತಿಯಲ್ಲಿ ಒಟ್ಟು 230 ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಇಲಾಖಾ ಮಾಹಿತಿ ಪ್ರಕಾರ ಬಂಟ್ವಾಳ ಉಪವಿಭಾಗದಲ್ಲಿ 48, ಬೆಳ್ತಂಗಡಿ ಉಪವಿಭಾಗದಲ್ಲಿ 103 ಹಾಗೂ ಪುತ್ತೂರು ಉಪವಿಭಾಗದಲ್ಲಿ 79 ಗಣೇಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಬೆಳ್ತಂಗಡಿ ಉಪವಿಭಾಗದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 25, ಧರ್ಮಸ್ಥಳದಲ್ಲಿ 20, ಪಂಜಿಕಲ್ಲಿನಲ್ಲಿ 7, ವೇಣೂರಿನಲ್ಲಿ 20, ಉಪ್ಪಿನಂಗಡಿಯಲ್ಲಿ 18 ಹಾಗೂ ಕಡಬದಲ್ಲಿ 13 ಕಾರ್ಯಕ್ರಮಗಳು ನಡೆಯಲಿವೆ.
ಬಂಟ್ವಾಳ ಉಪವಿಭಾಗದಲ್ಲಿ ಬಂಟ್ವಾಳ ಟೌನ್‌ನಲ್ಲಿ 12, ಬಂಟ್ವಾಳ ಗ್ರಾಮಾಂತರದಲ್ಲಿ 16 ಹಾಗೂ ವಿಟ್ಲದಲ್ಲಿ 20 ಕಾರ್ಯಕ್ರಮಗಳು ನಡೆಯಲಿವೆ. ಪುತ್ತೂರು ಉಪವಿಭಾಗದಲ್ಲಿ ಪುತ್ತೂರು ಟೌನ್‌ನಲ್ಲಿ 16, ಪುತ್ತೂರು ಗ್ರಾಮಾಂತರದಲ್ಲಿ 17, ಸುಳ್ಯದಲ್ಲಿ 17, ಸುಬ್ರಹ್ಮಣ್ಯದಲ್ಲಿ 11 ಹಾಗೂ ಬೆಳ್ಳಾರೆಯಲ್ಲಿ 18 ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಬಂದೋಬಸ್ತ್ ಗಾಗಿ 778 ಸಿಬ್ಬಂದಿ ನಿಯೋಜನೆ
ಗಣೇಶೋತ್ಸವದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದಿಂದ ಒಟ್ಟು 778 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇವರಲ್ಲಿ 1 ಹೆಚ್ಚುವರಿ ಪೊಲೀಸ್ ಅಧೀಕ್ಷಕ, 4 ಡಿವೈಎಸ್ಪಿ, 7 ಪಿಐ/ ಸಿಪಿಐ, 34 ಪಿಎಸ್ಐ, 52 ಎಎಸ್ಐ ಹಾಗೂ 520 ಪೊಲೀಸ್ ಸಿಬ್ಬಂದಿ ಸೇರಿದ್ದಾರೆ. ಇದರ ಜೊತೆಗೆ 150 ಗೃಹರಕ್ಷಕರು ಕರ್ತವ್ಯಕ್ಕೆ ನಿಯೋಜನೆಯಾಗಲಿದ್ದಾರೆ.
ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು 5 ಕೆಎಸ್‌ಆರ್‌ಪಿ ತುಕಡಿಗಳು ಹಾಗೂ 5 ಡಿಎಆರ್ ತುಕಡಿಗಳನ್ನೂ ನಿಯೋಜಿಸಲಾಗುತ್ತಿದೆ.
ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುವಂತೆ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಸಂಖ್ಯೆಗೆ ಅನುಗುಣವಾಗಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.



