ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೌರಿ-ಗಣೇಶ ಹಬ್ಬದ ಸಡಗರದಲ್ಲಿದ್ದ ಕುಟುಂಬವೊಂದಕ್ಕೆ ಇದೀಗ ಸೂತಕದ ಛಾಯೆ ಆವರಿಸಿದೆ. ಹಬ್ಬದ ಆಚರಣೆಗಾಗಿ ಬೆಂಗಳೂರಿನಿಂದ ತವರು ಮನೆಗೆ ಬಂದಿದ್ದ ಮಹಿಳಗೆ ಕೆಎಸ್ಆರ್ಟಿಸಿ (KSRTC) ಬಸ್ ಡಿಕ್ಕಿ ಹೊಡೆದ ಪರಿಣಾಮ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.
ಅಪರ್ಣಾ (31) ಸಾವನ್ನಪ್ಪಿದ ಗೃಹಿಣಿ ಎಂದು ಗುರುತಿಸಲಾಗಿದೆ, ಬಸ್ ಚಾಲಕನ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಮೂಲತಃ ಹಾಸನ ತಾಲೂಕಿನ ದೊಡ್ಡಆಲದಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಅಪರ್ಣಾ, ಪತಿ ಯೋಗೀಶ್ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಹಬ್ಬದ ರಜೆಯ ಹಿನ್ನೆಲೆಯಲ್ಲಿ ದೊಡ್ಡಆಲದಹಳ್ಳಿಯಲ್ಲಿರುವ ತಮ್ಮ ಪೋಷಕರ ಮನೆಗೆ ಬಂದಿದ್ದರು. ನಿನ್ನೆ (ಸೆ.12) ಹಾಸನ ನಗರದ ಎನ್.ಆರ್. ವೃತ್ತದ ಬಳಿ ತಮ್ಮ ಸ್ನೇಹಿತೆಯೊಂದಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ, ವೇಗವಾಗಿ ಬಂದ ಕೆಎಸ್ಆರ್ಟಿಸಿ ಬಸ್ ಇವರ ದ್ವಿಚಕ್ರ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಅಪರ್ಣಾ ಅವರು ಸ್ಕೂಟಿಯಿಂದ ಕೆಳಗೆ ಬಿದ್ದಿದ್ದು, ನಿಯಂತ್ರಣ ತಪ್ಪಿದ ಬಸ್ ಅವರ ಮೇಲೆಯೇ ಹರಿದಿದೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಅನಿರೀಕ್ಷಿತ ದುರಂತದಿಂದಾಗಿ ಅಪರ್ಣಾ ಅವರ ಕುಟುಂಬಸ್ಥರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ:
ಸ್ಥಳಕ್ಕೆ ಭೇಟಿ ನೀಡಿರುವ ಹಾಸನ ಟ್ರಾಫಿಕ್ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೆ ಕಾರಣನಾದ ಕೆಎಸ್ಆರ್ಟಿಸಿ ಬಸ್ ಚಾಲಕನ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತರ ಕುಟುಂಬಸ್ಥರು ಒತ್ತಾಯಿಸಿದ್ದಾರೆ.



