ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ನಡೆಯುತ್ತಿರುವ 2026ರ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿರುವ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಭಾನುವಾರದಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ವಿಶೇಷ ಉಪಹಾರ ಸಭೆ ನಡೆಸಿದ್ದಾರೆ. ದೆಹಲಿಯಲ್ಲಿ ನಡೆದ ಈ ಆತ್ಮೀಯ ಭೇಟಿಯಲ್ಲಿ ಭಾರತ ಮತ್ತು ಮಲೇಷ್ಯಾ ನಡುವಿನ ಬಾಂಧವ್ಯದ ಕುರಿತು ಮಹತ್ವದ ಚರ್ಚೆಗಳು ನಡೆದಿವೆ.

ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಶನಿವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವ್ಯಾಪಾರ, ಸೆಮಿಕಂಡಕ್ಟರ್, ಮೂಲಸೌಕರ್ಯ ಮತ್ತು ರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳ ಸಹಕಾರದ ಕುರಿತು ಅನ್ವರ್ ಇಬ್ರಾಹಿಂ ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೇ ಭಾನುವಾರ ಬೆಳಗ್ಗೆ ಅವರು ಗಾಂಧಿ ಕುಟುಂಬದ ನಾಯಕರನ್ನು ಭೇಟಿಯಾಗಿರುವುದು ರಾಜತಾಂತ್ರಿಕ ವಲಯದಲ್ಲಿ ಗಮನ ಸೆಳೆದಿದೆ.

ಮನ್ಮೋಹನ್ ಸಿಂಗ್ ಮೇಲಿನ ಅಪಾರ ಗೌರವ
ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರಿಗೆ ಭಾರತದ ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ಅವರ ಮೇಲಿದ್ದ ಸುದೀರ್ಘ ಅಭಿಮಾನ ಮತ್ತು ಗೌರವವೇ ಈ ಇಂದಿನ ಭೇಟಿಗೆ ಮುಖ್ಯ ಕಾರಣವಾಗಿದೆ. 2024ರ ಡಿಸೆಂಬರ್‌ನಲ್ಲಿ ಮನ್ಮೋಹನ್ ಸಿಂಗ್ ಅವರು ನಿಧನರಾದಾಗ ಅನ್ವರ್ ಇಬ್ರಾಹಿಂ ಅವರು ಭಾವನಾತ್ಮಕ ಪೋಸ್ಟ್ ಮಾಡುವ ಮೂಲಕ ತೀವ್ರ ಸಂತಾಪ ಸೂಚಿಸಿದ್ದರು. ಮನ್ಮೋಹನ್ ಸಿಂಗ್ ಅವರನ್ನು ತಮ್ಮ “ಆಪ್ತ ಮತ್ತು ಗೌರವಾನ್ವಿತ ಸ್ನೇಹಿತ” ಎಂದು ಬಣ್ಣಿಸಿದ್ದ ಅವರು, ಭಾರತದ ಆರ್ಥಿಕ ಸುಧಾರಣೆಯ ಜಗದ್ಗುರು ಎಂದು ಹೊಗಳಿದ್ದರು. 1990ರ ದಶಕದಲ್ಲಿ ಮಲೇಷ್ಯಾದ ಹಣಕಾಸು ಮಂತ್ರಿಯಾಗಿದ್ದ ಅನ್ವರ್, ಮನ್ಮೋಹನ್ ಸಿಂಗ್ ಅವರ ಆರ್ಥಿಕ ನೀತಿಗಳನ್ನು ಹತ್ತಿರದಿಂದ ಗಮನಿಸಿದ್ದರು.

ಕಷ್ಟದ ಕಾಲದಲ್ಲಿ ನೆರವಾಗಿದ್ದ ಸಿಂಗ್
ಅನ್ವರ್ ಇಬ್ರಾಹಿಂ ಅವರು ಹಿಂದೆ ರಾಜಕೀಯ ಏರುಪೇರುಗಳಿಂದ ಮಲೇಷ್ಯಾದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಸಂದರ್ಭದಲ್ಲಿ, ಅಂದಿನ ಭಾರತದ ಪ್ರಧಾನಿಯಾಗಿದ್ದ ಡಾ. ಮನ್ಮೋಹನ್ ಸಿಂಗ್ ಅವರು ಅನ್ವರ್ ಅವರ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸಲು ಸ್ವತಃ ಮುಂದೆ ಬಂದಿದ್ದರು. ಅಂದಿನ ಮಲೇಷ್ಯಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವ ಆತಂಕವಿದ್ದರೂ, ಮನ್ಮೋಹನ್ ಸಿಂಗ್ ಅವರು ಮಾನವೀಯತೆಯ ದೃಷ್ಟಿಯಿಂದ ಈ ಧೈರ್ಯದ ಹೆಜ್ಜೆ ಇಟ್ಟಿದ್ದರು.
ಇದನ್ನೂ ಓದಿ:
ಅವರ ಪ್ರಾಮಾಣಿಕ ಗುಣಕ್ಕೆ ತಕ್ಕಂತೆ ಅವರು ಸಹಾಯ ಮಾಡಲು ಮುಂದಾಗಿದ್ದರು. ನಾನು ನಯವಾಗಿಯೇ ಆ ನೆರವನ್ನು ನಿರಾಕರಿಸಿದರೂ, ಮನ್ಮೋಹನ್ ಸಿಂಗ್ ಅವರ ಆ ಸಹಾನುಭೂತಿ ಮತ್ತು ಪ್ರಾಮಾಣಿಕತೆಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅನ್ವರ್ ಇಬ್ರಾಹಿಂ ಈ ಹಿಂದೆ ನೆನಪಿಸಿಕೊಂಡಿದ್ದರು. ಇದೇ ಕಾರಣಕ್ಕೆ ಇಂದು ಭಾರತಕ್ಕೆ ಬಂದಾಗ ಅವರ ನೆನಪಿನ ಅಂಗವಾಗಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿ ಕೃತಜ್ಞತೆ ತಿಳಿಸಿದ್ದಾರೆ.



