September 13, 2026
Sunday, September 13, 2026
spot_img

ಗೌರಿಹಬ್ಬಕ್ಕೆ ವಿಭಿನ್ನ ಮೆರುಗು: 26 ಆಶ್ರಮವಾಸಿ, ಆರ್ಥಿಕವಾಗಿ ಹಿಂದುಳಿದ ಹೆಣ್ಮಕ್ಕಳಿಗೆ ಉಚಿತ ಮೂಗುತಿ ಧಾರಣೆ

ಹೊಸದಿಗಂತ ವರದಿ ಉಳ್ಳಾಲ:

ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಈ ಬಾರಿಯ ಗೌರಿಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗಿದೆ.

ಕ್ಷೇತ್ರದ‌ ಆಡಳಿತ ಸಮಿತಿಯ ವತಿಯಿಂದ ಪ್ರಥಮ‌ ಬಾರಿಗೆ ಹೆಣ್ಮಕ್ಕಳಿಗೆ ಸಂಪ್ರದಾಯಬದ್ಧವಾಗಿ ಸಾಮೂಹಿಕ ಮೂಗುತಿ ಧಾರಣಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಶ್ರಮವಾಸಿ ಹಾಗೂ ಆರ್ಥಿಕವಾಗಿ ಹಿಂದುಳಿದ 26 ಹೆಣ್ಮಕ್ಕಳಿಗೆ ಉಚಿತವಾಗಿ ಹಾಗೂ 9 ಹೆಣ್ಮಕ್ಕಳಿಗೆ ಪೋಷಕರೇ ಶ್ರೀ ಕ್ಷೇತ್ರದಲ್ಲಿ ಮೂಗುತಿ ಧಾರಣೆ ನಡೆಸಿದರು.

ಸಂಸದ ಬ್ರಿಜೇಶ್ ಚೌಟ ಅವರ ಹೆತ್ತವರಾದ ಸೇಸಣ್ಣ ಚೌಟ ಹಾಗೂ ಪುಷ್ಪಾ ಚೌಟ ದಂಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸೇಸಣ್ಣ ಚೌಟರು ಹೆಣ್ಮಕ್ಕಳಿಗೆ ಮೂಗುತಿ ಧಾರಣೆಯು ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಸಹಕಾರಿಯಾಗಿದೆ ಎಂಬ ನಂಬಿಕೆ ಇದೆ. ಸಂಪ್ರದಾಯಬದ್ಧವಾದ ಮೂಗುತಿ ಧಾರಣೆಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಡೆಸಲಾದ ಈ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆಯೆಂದರು.

ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ ಮಾತನಾಡಿ, ಹಿಂದೂ ಧರ್ಮದ ಸಂಸ್ಕೃತಿ ಹಾಗೂ ಸಂಪ್ರದಾಯದಂತೆ ಹೆಣ್ಮಕ್ಕಳಿಗೆ ಮೂಗುತಿ ಧಾರಣೆ ಮಾಡಿಸುವ ಉದ್ಧೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಜಿ.ಪಂ ಮಾಜಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅವರ ಸಲಹೆಯಂತೆ ದಾನಿಗಳು ಹಾಗೂ ಸಮಿತಿಯವರು ಚರ್ಚಿಸಿ, ಆರ್ಥಿಕವಾಗಿ ಹಿಂದುಳಿದ ಹೆಣ್ಮಕ್ಕಳಿಗೂ ಈ ಅವಕಾಶ ದೊರೆಯಬೇಕೆಂಬ ನಿರ್ಧಾರ ಕೈಗೊಳ್ಳಲಾಯಿತು. ಸಂಸದ ಬ್ರಿಜೇಶ್ ಚೌಟರ ಹೆತ್ತವರು ಸೇರಿದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್ ಕುತ್ತಾರ್, ದುರ್ಗಾವಾಹಿನಿ ಮಹಿಳಾ ಮಂಡಲ, ವರಮಹಾಲಕ್ಷ್ಮಿ ಸಮಿತಿ ದುಬೈ ಹಾಗೂ ಹಲವು ದಾನಿಗಳ ಸಹಕಾರದಿಂದ ಈ ಕಾರ್ಯಕ್ರಮ ನೆರವೇರಿಸಲಾಗಿದೆ ಎಂದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಮಾತನಾಡಿ ಮೂಗುತಿ ಧಾರಣೆಯು ಹೆಣ್ಮಕ್ಕಳ ಜೀವನದಲ್ಲಿ ಎದುರಾಗುವ ವಿವಿಧ ನೋವುಗಳನ್ನು ಎದುರಿಸುವ ಮನೋಸ್ಥೈರ್ಯವನ್ನು ಬೆಳೆಸುವ ಒಂದು ಸಣ್ಣ ನೋವಿನ ಅನುಭವವಾಗಿದೆ. ವಿಶೇಷವಾಗಿ ಋತುಚಕ್ರದ ಸಂದರ್ಭ ಎದುರಾಗುವ ನೋವುಗಳನ್ನು ಸಹಿಸಿಕೊಳ್ಳುವ ಮಾನಸಿಕ ದೃಢತೆಯನ್ನು ಬೆಳೆಸುವಲ್ಲಿಯೂ ಇದರ ಪಾತ್ರವಿದೆ. ಸಾಮೂಹಿಕ ಮೂಗುತಿ ಧಾರಣೆಯ ಕಲ್ಪನೆಯನ್ನು ಪ್ರಸ್ತಾಪಿಸಿದಾಗ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ದಾನಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.

ವಿಶ್ವಕರ್ಮ ಸಮುದಾಯದ ನಾಗೇಶ್‌ ಆಚಾರ್ಯ, ಸುರೇಶ್‌ ಆಚಾರ್ಯ, ಸತೀಶ್‌ ಆಚಾರ್ಯ, ಯಶೋಧರ ಆಚಾರ್ಯ ಅವರುಗಳು ಮೂಗುತಿ ಧಾರಣೆ ನಡೆಸಿಕೊಟ್ಟರು. ಕ್ಷೇತ್ರದ ಉಪಾಧ್ಯಕ್ಷರಾದ ವಾಸುಪೂಜಾರಿ, ಖಜಾಂಚಿ ಜಗನ್ನಾಥ್‌ ಸಾಲ್ಯಾನ್‌, ಪ್ರ.ಕಾ ಪುಷ್ಪರಾಜ್‌, ಸಂ.ಕಾ.ಜೆ.ಕೆ ರೈ, ಪ್ರಧಾನ ಅರ್ಚಕ ವಿಜಯ ನಾವಡ, ಪ್ರಮುಖರಾದ ದಿನೇಶ್‌ ಗಟ್ಟಿ, ಮಾಧವ ನಾಯ್ಕ್‌ , ರಾಮಕೃಷ್ಣ ಬಬ್ಬುಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !