ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಧುನಿಕತೆಯ ಹೆಸರಿನಲ್ಲಿ ಸ್ಟೀಲ್, ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ಪಾತ್ರೆಗಳ ಬಳಕೆಯನ್ನು ಹೆಚ್ಚಿಸಿಕೊಳ್ಳುವ ಬದಲು ಆರೋಗ್ಯದ ದೃಷ್ಟಿಯಿಂದ ಪಾರಂಪರಿಕ ಪಾತ್ರೆಗಳ ಬಳಕೆಗೆ ಮರಳಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಲಹೆ ನೀಡಿದ್ದಾರೆ.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಭಾನುವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ನೀರಿನ ಪಾತ್ರೆಗಳ ಕುರಿತು ಶ್ರೀಗಳು ಪ್ರವಚನ ಅನುಗ್ರಹಿಸಿದರು.

ಪಾತ್ರೆಗಳು ಕೇವಲ ನೀರು ಅಥವಾ ಆಹಾರವನ್ನು ಶೇಖರಿಸುವ ಸಾಧನಗಳಲ್ಲ. ಅವುಗಳ ಗುಣಾವಗುಣಗಳು ಅದರಲ್ಲಿರುವ ಪದಾರ್ಥಗಳ ಮೇಲೂ ಪರಿಣಾಮ ಬೀರುತ್ತವೆ ಎಂದು ಹೇಳಿದರು.
ಚಿನ್ನ, ಬೆಳ್ಳಿ, ತಾಮ್ರ, ಕಂಚು ಹಾಗೂ ಹಿತ್ತಾಳೆಯಂತಹ ಪಾರಂಪರಿಕ ಲೋಹಗಳ ಪಾತ್ರೆಗಳು ನೀರಿನ ಗುಣವೃದ್ಧಿಗೆ ಸಹಕಾರಿಯಾಗುತ್ತವೆ. ಗಾಜಿನ ಪಾತ್ರೆ ಗುಣವೃದ್ಧಿ ಮಾಡದಿದ್ದರೂ ಗುಣಹಾನಿ ಮಾಡುವುದಿಲ್ಲ. ಆದರೆ ಸ್ಟೇನ್ಲೆಸ್ ಸ್ಟೀಲ್ , ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ಪಾತ್ರೆಗಳು ಸರ್ವದಾ ಬಳಕೆಗೆ ಅಯೋಗ್ಯ ಎಂದು ಅವರು ಸಲಹೆ ನೀಡಿದರು.

ನಾಡಿ ವಿಜ್ಞಾನದಲ್ಲಿ ಸಿದ್ಧಿ ಹೊಂದಿದ್ದ ಶ್ರೀರಂಗ ಮಹಾಗುರುಗಳು ವಿವಿಧ ಪಾತ್ರೆಗಳಲ್ಲಿ ಹಾಲನ್ನು ಇರಿಸಿ ನಡೆಸಿದ ಪ್ರಯೋಗಗಳ ಕುರಿತು ಉಲ್ಲೇಖಿಸಿದ ರಾಘವೇಶ್ವರ ಶ್ರೀಗಳು, ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳ ಬಳಕೆಯಿಂದ ದೇಹದ ವಾತ, ಪಿತ್ತ, ಕಫದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದನ್ನು ದಾಖಲಿಸಲಾಗಿತ್ತು ಎಂದು ಹೇಳಿದರು.
ಆಧುನಿಕ ವಿಜ್ಞಾನ ಆಹಾರ ದರ್ಜೆಯ ಸ್ಟೇನ್ಲೆಸ್ ಸ್ಟೀಲ್ ಬಳಕೆಗೆ ಯೋಗ್ಯ ಎಂದು ಹೇಳುತ್ತಿದೆಯಾದರೂ, ಬದಲಾಗುವ ಇಂದಿನ ವಿಜ್ಞಾನ ಕೆಲವು ವರ್ಷಗಳ ನಂತರ ಇದು ಅಯೋಗ್ಯ ಎಂದು ಹೇಳಬಹುದು. ಆದರೆ ಅದಕ್ಕಾಗಿ ನಮ್ಮ ಆರೋಗ್ಯವನ್ನು ಅಪಾಯಕ್ಕೆ ಒಡ್ಡಿಕೊಳ್ಳಬೇಕಿಲ್ಲ ಎಂದರು.

ಶ್ರೀಕರಾರ್ಚಿತ ಪೂಜೆ ಹಾಗೂ ಪೀಠಾಧಿಪತಿಗಳ ಬಳಕೆಯಲ್ಲಿ ಹಲವು ವರ್ಷಗಳಿಂದ ಸ್ಟೀಲ್, ಪ್ಲಾಸ್ಟಿಕ್ ಮುಂತಾದವುಗಳನ್ನು ದೂರವಿಡಲಾಗಿದೆ. ಇದೇ ರೀತಿಯಾಗಿ ಸಾರ್ವಜನಿಕರೂ ಹಂತಹಂತವಾಗಿ ತಾಮ್ರ, ಕಂಚು, ಹಿತ್ತಾಳೆ ಹಾಗೂ ಗಾಜಿನ ಪಾತ್ರೆಗಳ ಬಳಕೆಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜೀವ ಹಾಗೂ ಜೀವನಕ್ಕಿಂತ ಬೆಲೆ ದೊಡ್ಡದ್ದಲ್ಲ. ದುಂದು ವೆಚ್ಚ ಕಡಿಮೆ ಮಾಡಿ ಆರೋಗ್ಯದ ದೃಷ್ಟಿಯಿಂದ ಪಾರಂಪರಿಕ ಪಾತ್ರೆಗಳ ಬಳಕೆಗೆ ಮುಂದಾಗಿ ಎಂದು ಶ್ರೀಗಳು ಹೇಳಿದರು.
ಕಾರ್ಯಕ್ರಮದಲ್ಲಿ ಶಿರಸಿಯ ಶಾಸಕ ಭೀಮಣ್ಣ ಟಿ ನಾಯ್ಕ್, ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್, ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು. ಬೆಂಗಳೂರು ಉತ್ತರ ಮಂಡಲದ ಪರವಾಗಿ ಕೆ.ಎಮ್. ದಿವಾಕರ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಗಣಪತಿ ಪುದುಕೊಳಿ ದಂಪತಿ ದಿನಪ್ರಧಾನರಾಗಿ ಉಪಸ್ಥಿತರಿದ್ದರು.




