ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಲಾಸ್ಟಿಕ್ ಹಾನಿಕಾರಕ ಎಂದು ಆಧುನಿಕ ವಿಜ್ಞಾನವೇ ಹೇಳುತ್ತಿದ್ದರೂ, ಅದರ ಬಳಕೆ ಎಲ್ಲೆಡೆ ಹೆಚ್ಚುತ್ತಲೇ ಇದೆ. ಹೀಗಾಗಿ ಪ್ಲಾಸ್ಟಿಕ್ ಮುಕ್ತ ಜೀವನದತ್ತ ಸಾಗಲು ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಧೈರ್ಯ ನಮಗಿರಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಸೋಮವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ಬದಲಾವಣೆ ಬೇರೆಯವರ ಮನೆಯಿಂದ ಆರಂಭವಾಗಬೇಕಿಲ್ಲ; ಅದು ನಮ್ಮ ಮನೆ ಮತ್ತು ನಮ್ಮಿಂದಲೇ ಆರಂಭವಾಗಬೇಕು ಎಂದು ಕರೆ ನೀಡಿದರು.
ಉತ್ತಮವಾದುದನ್ನು ಕೆಡಿಸಿ, ಹಾನಿಕಾರಕವಾದುದನ್ನು ಸಮಾಜಕ್ಕೆ ನೀಡುವುದೇ ಕಲಿಯುಗದ ಲಕ್ಷಣ. ಪ್ಲಾಸ್ಟಿಕ್ ಹಾಗೂ ಕೃತಕ ವಸ್ತುಗಳು ಅತ್ಯಂತ ಹಾನಿಕಾರಕ ಎಂದು ವಿಜ್ಞಾನ ಒಪ್ಪಿಕೊಂಡಿದ್ದರೂ, ಅವುಗಳ ಉತ್ಪಾದನೆ ಮತ್ತು ಬಳಕೆ ನಿಲ್ಲುತ್ತಿಲ್ಲ ಎಂದು ಅವರು ಹೇಳಿದರು. ಕುಡಿಯುವ ನೀರನ್ನು ಶುದ್ಧೀಕರಿಸಲು RO ಪ್ಯೂರಿಫೈಯರ್ಗಳಿದ್ದರೂ, ಅವು ಕೂಡ ಪ್ಲಾಸ್ಟಿಕ್ನಿಂದಲೇ ಆವೃತವಾಗಿವೆ ಎಂದು ತಿಳಿಸಿದರು.

ಆಯುರ್ವೇದದಲ್ಲಿ ನೀರನ್ನು ಶುದ್ಧೀಕರಿಸಲು ನಿರ್ವಾಪಣ, ಕ್ವಥನ, ಪ್ರಸಾದನ ಸೇರಿದಂತೆ ಹಲವು ವಿಧಾನಗಳನ್ನು ಸೂಚಿಸಲಾಗಿದೆ. ಕತಕ, ಗೋಮೇಧಿಕ, ಶೈವಾಲಮೂಲ ಹಾಗೂ ಸ್ಪಟಿಕ ಮಣಿಗಳನ್ನು ಬಳಸಿ ನೀರನ್ನು ಬಳಕೆಗೆ ಯೋಗ್ಯವಾಗಿಸುವ ವಿಧಾನಗಳನ್ನೂ ಆಯುರ್ವೇದ ವಿವರಿಸಿದೆ ಎಂದು ಶ್ರೀಗಳು ಹೇಳಿದರು. ಹೂವು ಹಾಗೂ ನೈಸರ್ಗಿಕ ಸುಗಂಧ ಪದಾರ್ಥಗಳನ್ನು ಬಳಸಿ ನೀರಿನ ಮೌಲ್ಯ ವೃದ್ಧಿಸುವ ವಿಧಾನಗಳ ಬಗ್ಗೆಯೂ ಅವರು ವಿವರಿಸಿದರು.
ಪ್ಲಾಸ್ಟಿಕ್ ಹಾನಿಕಾರಕ ಎಂದು ಇಡೀ ಪ್ರಪಂಚವೇ ಹೇಳುತ್ತಿದ್ದರೂ ಅದನ್ನು ಯಾರೂ ಸಂಪೂರ್ಣವಾಗಿ ನಿಷೇಧಿಸುತ್ತಿಲ್ಲ. ಹೀಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಬದಲಾವಣೆ ಮಾಡಿಕೊಳ್ಳುತ್ತಾ, ಕನಿಷ್ಠ ನಮ್ಮ ಜೀವನವನ್ನಾದರೂ ಉತ್ತಮವಾಗಿ ಇಟ್ಟುಕೊಳ್ಳಬೇಕು ಎಂದು ರಾಘವೇಶ್ವರ ಶ್ರೀ ಕರೆ ನೀಡಿದರು.



