ಹೊಸದಿಗಂತ ವರದಿ ಬೆಳಗಾವಿ:
ಜಿಲ್ಲಾಧಿಕಾರಿ ಕಚೇರಿ ಹಾಗೂ ನಿವಾಸದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕೋಮು ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ್ದಾರೆ.
“ನಾನು ಜಿಲ್ಲಾಧಿಕಾರಿಯಾಗಿ ಕಳೆದ ಮೂರು ವರ್ಷಗಳಿಂದ ಡಿಸಿ ಕಚೇರಿ ಹಾಗೂ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುತ್ತಾ, ಸೌಹಾರ್ದತೆಯ ಸಂದೇಶವನ್ನು ಸಾರುತ್ತಾ ಬಂದಿದ್ದೇನೆ. ಯಾವುದೇ ಭೇದ-ಭಾವವಿಲ್ಲದೆ ಪ್ರತಿಯೊಂದು ಹಬ್ಬ, ಜಾತ್ರೆ ಮತ್ತು ಮೆರವಣಿಗೆಗಳಲ್ಲಿ ನಾವೆಲ್ಲರೂ ಒಂದಾಗಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆ ಯಾವಾಗಲೂ ಮುಂಚೂಣಿಯಲ್ಲಿರಬೇಕು ಎಂಬುದು ನಮ್ಮ ಆಶಯ” ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ನಗರದ ಪ್ರಸಿದ್ಧ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ಗಣೇಶ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪ್ರತಿ ವರ್ಷದ ಸಂಪ್ರದಾಯದಂತೆ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಸಡಗರದಿಂದ ತಮ್ಮ ಕಚೇರಿ ಹಾಗೂ ನಿವಾಸಕ್ಕೆ ಕೊಂಡೊಯ್ದರು. ಈ ಮೂಲಕ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಜಿಲ್ಲೆಯಲ್ಲಿ ಮತ್ತೊಮ್ಮೆ ಕೋಮು ಸೌಹಾರ್ದತೆ, ಸಾಮರಸ್ಯ ಹಾಗೂ ಸಹೋದರತ್ವದ ಸಂದೇಶವನ್ನು ಸಾರಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಪ್ರತಿವರ್ಷ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಈ ವರ್ಷವೂ ಅದೇ ರೀತಿಯಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು. ಕಳೆದ ಎರಡು ವರ್ಷಗಳಿಂದ ಡಿಸಿ ಕಚೇರಿ ಮತ್ತು ಮನೆಯಲ್ಲಿ ಶ್ರೀ ಗಣಪತಿಯನ್ನು ಪ್ರತಿಷ್ಠಾಪಿಸುತ್ತಿದ್ದೇನೆ. ಇದೀಗ ಮೂರನೇ ವರ್ಷವೂ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದೇನೆ. ಬಳಿಕ ಪರಿಸರ ಸ್ನೇಹಿ ಬಾಲ ಗಣಪತಿಯ ಮೂರ್ತಿಯನ್ನು ಕಚೇರಿ ಮತ್ತು ಮನೆಗೆ ಕೊಂಡೊಯದ್ದಿದ್ದೇವೆ ಎಂದು ಅವರು ತಿಳಿಸಿದರು.
ಗಣೇಶೋತ್ಸವ ಸೇರಿದಂತೆ ಎಲ್ಲ ಹಬ್ಬಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಬಾಂಧವ್ಯವನ್ನು ಬೆಳೆಸುವಂತಾಗಬೇಕು. ಎಲ್ಲ ಸಮುದಾಯಗಳ ಜನರು ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುವ ಮೂಲಕ ಬೆಳಗಾವಿಯ ಸೌಹಾರ್ದ ಪರಂಪರೆಯನ್ನು ಮತ್ತಷ್ಟು ಬಲಪಡಿಸಬೇಕು ಎಂಬ ಆಶಯವನ್ನು ಜಿಲ್ಲಾಧಿಕಾರಿ ವ್ಯಕ್ತಪಡಿಸಿದರು.



