ಹೊಸದಿಗಂತ ವರದಿ ದಾವಣಗೆರೆ:
ಭದ್ರಾ ಡ್ಯಾಂ ನಿಂದ ಮೇಲ್ದಂಡೆಗೆ ನೀರು ಹರಿಸುವುದನ್ನು ವಿರೋಧಿಸಿ ಹಾಗೂ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-48ನ್ನು ಬಂದ್ ಮಾಡಲಾಯಿತು. ಈ ವೇಳೆ ದೊಡ್ಡ ಹೈಡ್ರಾಮಾ ನಡೆದು, ಹೋರಾಟನಿರತ ರೈತರು, ಸಿಪಿಐ, ಪೊಲೀಸ್ ಸಿಬ್ಬಂದಿ ಸೇರಿದಂತೆ ಆರೇಳು ಜನರಿಗೆ ರಕ್ತಗಾಯಗಳಾಗಿವೆ.
ಹೋರಾಟದ ಅಂಗವಾಗಿ ಬಾಡಾ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ಪ್ರತಿಭಟನಾನಿರತ ರೈತರು ಒಲೆ, ಪಾತ್ರೆಗಳನ್ನಿಟ್ಟುಕೊಂಡು ಅಡುಗೆ ಮಾಡಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇತರರ ನಡುವೆ ಮಾತಿನ ಚಕಮಕಿ ಶುರುವಾಯಿತು. ಹೆದ್ದಾರಿ ಬಂದ್ ಮಾಡದಂತೆ ಪೊಲೀಸ್ ಅಧಿಕಾರಿಗಳು ವಿನಂತಿಸಿದರೂ, ಕಿವಿಗೊಡದ ಪ್ರತಿಭಟನಾಕಾರರು ಹೆದ್ದಾರಿ ಪಕ್ಕದ ಜಾಗದಲ್ಲಿ ಅಡುಗೆ ಮಾಡುವ ಮೂಲಕ ಹೋರಾಟಕ್ಕೆ ಸಿದ್ಧರಾಗಿದ್ದರು. ಅಲ್ಲದೆ, ಹೆದ್ದಾರಿ ಬಂದ್ ಗೆಂದು ಟ್ರ್ಯಾಕ್ಟರ್, ಬೈಕ್, ಕಾರುಗಳಲ್ಲಿ ರೈತರು ಬರುವುದನ್ನು ಪೊಲೀಸರು ತಡೆದಿದ್ದು ಕೂಡ ಆಕ್ರೋಶಕ್ಕೆ ಕಾರಣವಾಯಿತು.
ಅಚ್ಚುಕಟ್ಟು ರೈತರಿಗೆ ಘೋರ ಅನ್ಯಾಯ
ಇದೇ ವೇಳೆ ರೇಣುಕಾಚಾರ್ಯ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ಘೋರ ಅನ್ಯಾಯ ಮಾಡಿದ್ದಾರೆ. ಭದ್ರಾ ಡ್ಯಾಂ ಇತಿಹಾಸದಲ್ಲೇ ಮೊದಲ ಸಲ ಐಸಿಸಿ ಸಭೆಯಲ್ಲಿ ನಿರ್ಣಯವೇ ಆಗದೇ ನೆರೆಯ ಜಿಲ್ಲೆಗಳಿಗೆ 3 ಟಿಎಂಸಿ ನೀರನ್ನು ಪ್ರಾಯೋಗಿಕವಾಗಿ ಹರಿಸುತ್ತಿದ್ದಾರೆ. ಮಳೆ ಕೈಕೊಟ್ಟು, ಗಂಭೀರ ಬರ ಆವರಿಸಿದ್ದರೂ ಸಹ ಭದ್ರಾ ಅಚ್ಚುಕಟ್ಟು ರೈತರನ್ನು ಕಡೆಗಣಿಸಿ, ಹಿರಿಯೂರು ಉಪ ಚುನಾವಣೆ ಗಮನದಲ್ಲಿಟ್ಟುಕೊಂಡು ನೀರು ಹರಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಸ್ತೆ ಬಂದ್ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ, ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೇಬಾಳು, ಬಿ.ಎಸ್.ಜಗದೀಶ, ಬಿ.ಜಿ.ಅಜಯಕುಮಾರ, ವೀರಭದ್ರಪ್ಪ, ಪ್ರವೀಣ ಜಾಧವ್, ರಾಜು ವೀರಣ್ಣ, ಕುರ್ಕಿ ರೇವಣ್ಣ, ಪಂಜು ಪೈಲ್ವಾನ್, ದಿಗ್ಗೇನಹಳ್ಳಿ ನಾಗರಾಜ, ವಿಶ್ವನಾಥ, ರಾಜು ಗೌಡ, ಕೆ.ಎನ್.ವೆಂಕಟೇಶ ಸೇರಿದಂತೆ 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು, ಪೊಲೀಸ್ ಕವಾಯಿತು ಮೈದಾನಕ್ಕೆ ಕರೆದೊಯ್ದರು.
ಪೊಲೀಸ್ ಸಿಬ್ಬಂದಿ-ರೈತರ ನಡುವೆ ಜಟಾಪಟಿ
ಹೆದ್ದಾರಿಯಲ್ಲಿ ಹೋರಾಟನಿರತರನ್ನು ವಶಕ್ಕೆ ಪಡೆಯುವ ವೇಳೆ ಪೊಲೀಸ್ ಅಧಿಕಾರಿ, ಸಿಬ್ಬಂದಿ, ರೈತ ಮುಖಂಡರು ಹಾಗೂ ರೈತರಿಗೆ ತರಚು ಗಾಯ, ಪೆಟ್ಟುಗಳಾದವು. ರೈತ ಮುಕ್ತೇನಹಳ್ಳಿ ಶಿವಯೋಗಿ ತಲೆಗೆ ರಕ್ತಗಾಯಗಳಾಗಿದ್ದರೂ ಪೊಲೀಸರು ವಶಕ್ಕೆ ಪಡೆದು, ಕರೆದೊಯ್ದರು. ಈ ವೇಳೆ ಸಿಪಿಐ ಸುರೇಶ ಸಗರಿ ಸೇರಿದಂತೆ ಇಬ್ಬರು ಸಿಬ್ಬಂದಿಗೂ ಪೆಟ್ಟಾಗಿದೆ. ಹಲವಾರು ರೈತರು, ಪೊಲೀಸರಿಗೆ ತರಚು ಗಾಯ, ಪೆಟ್ಟುಗಳಾಗಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು.



