September 15, 2026
Tuesday, September 15, 2026
spot_img

‘ಕೇಂದ್ರ ಸಚಿವರಾಗಿದ್ದೀರಿ, ಗೌರವದಿಂದ ಮಾತನಾಡಿ’: ಕುಮಾರಸ್ವಾಮಿಗೆ ಸಚಿವ ಬಾಲಕೃಷ್ಣ ತಿರುಗೇಟು

ಹೊಸದಿಗಂತ ವರದಿ ರಾಮನಗರ :

ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವರು ಗೌರವಯುತವಾಗಿ ಮಾತನಾಡಬೇಕು. ಕೇಂದ್ರ ಮಂತ್ರಿ ಎನ್ನುವುದನ್ನು ಮರೆತು ಗ್ರಾಮ ಪಂಚಾಯಿತಿ ಸದಸ್ಯರಂತೆ ಎಚ್.ಡಿ. ಕುಮಾರಸ್ವಾಮಿ ವರ್ತಿಸುತ್ತಿದ್ದಾರೆ ಎಂದು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿಚಾರದ ಬಗ್ಗೆ ಯಾಕೆ ಮಾತನಾಡ್ತಾರೆ? ಅದು ಅಸಹ್ಯ. ಪ್ರಜ್ವಲ್ ಪ್ರಕರಣಕ್ಕೂ, ನೈಸ್-ಕೆಪಿಎಸ್‌ಸಿಗೂ ಏನು ಸಂಬಂಧ? ಹೀಗೆ ಪದೇ ಪದೇ ಮಾತನಾಡಿಯೇ ಪ್ರಜ್ವಲ್‌ರನ್ನ ಜೈಲಿಗೆ ಕಳುಹಿಸಿದರು. ಪ್ರಜ್ವಲ್ ಜೈಲಲ್ಲೇ ಇರಬೇಕು, ಅವರನ್ನು ರಾಜಕೀಯವಾಗಿ ಮುಗಿಸಿ ತಮ್ಮ ಮಗನನ್ನು ಪ್ರತಿಷ್ಠಾಪನೆ ಮಾಡಬೇಕು ಎನ್ನುವುದೇ ಕುಮಾರಸ್ವಾಮಿ ಅವರ ಅಸಲಿ ಅಭಿಲಾಷೆಯಾಗಿದೆ. ಪ್ರಜ್ವಲ್ ಬಳಿ ಮೊಬೈಲ್ ಹೇಗೆ ಬಂತು ಎಂದು ಅನುಮಾನವಿದ್ದರೆ ಸಿಬಿಐ ತನಿಖೆಗೆ ಪತ್ರ ಬರೆಯಲಿ ಎಂದರು.

ರಾಜ್ಯ ಸರ್ಕಾರದ 100ನೇ ದಿನದ ಸಾಧನಾ ಕಾರ್ಯಕ್ರಮವನ್ನು ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಪಂಚದಲ್ಲಿ ಕುಮಾರಸ್ವಾಮಿ ಒಬ್ಬರೇ ಮೇಧಾವಿ, ಉಳಿದವರೆಲ್ಲ ದಡ್ಡರು ಎನ್ನುವ ಮನಸ್ಥಿತಿ ಅವರದ್ದು. ನಾನು ಹುಟ್ಟಿದ್ದೇ ಬಡವರಿಗಾಗಿ ಎನ್ನುವ ಅವರ ಮನಸ್ಥಿತಿಯ ಬಗ್ಗೆ ನಾವೇನೂ ಮಾತನಾಡಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ:

ದೇವೇಗೌಡರ ಕುಟುಂಬವನ್ನು ಮುಗಿಸಲು ಸಂಚು ರೂಪಿಸಲಾಗಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಅವರು, ಯಾರೋ ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ನಮ್ಮನ್ನು ಮುಗಿಸಲು ಅವರು ನೋಡಿದರೆ, ನಾವು ಅದನ್ನೇ ಮಾಡುತ್ತೇವೆ, ಇದು ರಾಜಕಾರಣ. ದೇವೇಗೌಡರು, ಕುಮಾರಸ್ವಾಮಿ ಎಂದರೆ ಒಕ್ಕಲಿಗರು ಎದ್ದು ನಿಲ್ಲುತ್ತಾರೆ ಎನ್ನುವ ಸೆಂಟಿಮೆಂಟ್ ರಾಜಕಾರಣ ಬಿಡಲಿ. ಕೇಂದ್ರ ಮಂತ್ರಿಯಾಗಿದ್ದಾರೆ, ರಾಜ್ಯಕ್ಕೆ ಉದ್ಯೋಗಗಳನ್ನು ತರಲಿ ನಮ್ಮ ಸರ್ಕಾರ ಜಾಗ ನೀಡಲು ಸಿದ್ಧವಿದೆ ಎಂದು ತಿಳಿಸಿದರು.

ನಾನು ವಿದೇಶದಿಂದ ಬರುವವರೆಗೆ ಯಾರೂ ನಿದ್ದೆ ಮಾಡಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಡಿದ ಬಾಲಕೃಷ್ಣ, ಅಯ್ಯೋ.. ಅವರು ಬರುವವರೆಗೂ ನಾವ್ಯಾರೂ ನಿದ್ದೆಯೇ ಮಾಡಿರಲಿಲ್ಲ. ನಾಳೆಯಿಂದ ನೆಮ್ಮದಿಯಾಗಿ ನಿದ್ದೆ ಮಾಡುತ್ತೇವೆ. ಎಲ್ಲಿ ಎದೆ ಡಮ್ ಅನ್ನುತ್ತೋ ಅಂತ ಭಯ ಇತ್ತು, ಎದೆ ಗಟ್ಟಿಯಾಗಿ ಇಟ್ಟುಕೊಂಡಿದ್ದೆವು. ಇಂತಹ ಚಿಲ್ಲರೆ ಹೇಳಿಕೆಗಳನ್ನು ನೀಡುವುದನ್ನು ಅವರು ನಿಲ್ಲಿಸಬೇಕು ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !