September 15, 2026
Tuesday, September 15, 2026
spot_img

ಬಿಗ್‌ಬಾಸ್‌ನಿಂದ ಸಡನ್ ಎಕ್ಸಿಟ್: ಓಂ ಪ್ರಕಾಶ್ ರಾವ್ ಮತ್ತೆ ದೊಡ್ಮನೆಗೆ ಬರ್ತಾರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಕನ್ನಡ ಸೀಸನ್ 13 ಶುರುವಾಗಿ ಜಸ್ಟ್ ಒಂದು ವಾರ ಮುಗಿದಿದೆ, ಈಗಷ್ಟೇ ಆಟ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರವೇ ಪ್ರಥಮಾ ಪ್ರಸಾದ್ ಎಲಿಮಿನೇಟ್ ಆಗಿ ಆಚೆ ಬಂದಾಯ್ತು. ಆದರೆ, ಎಲ್ಲರಿಗೂ ದೊಡ್ಡ ಶಾಕ್ ಕೊಟ್ಟಿದ್ದು ಡೈರೆಕ್ಟರ್ ಓಂ ಪ್ರಕಾಶ್ ರಾವ್ ಅವರ ಸಡನ್ ಎಕ್ಸಿಟ್. ದೊಡ್ಮನೆಯಲ್ಲಿದ್ದಷ್ಟು ದಿನ ತಮಾಷೆ ಮಾಡ್ಕೊಂಡು, ಸಖತ್ ಎಂಟರ್‌ಟೈನ್‌ಮೆಂಟ್ ಕೊಡ್ತಿದ್ದ ಓಂ ಪ್ರಕಾಶ್ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ದಿಢೀರನೆ ಅನಾರೋಗ್ಯದ ನೆಪ ನೀಡಿ ಅವರು ಶೋನಿಂದ ಹೊರಬಂದಿದ್ದು ಪ್ರೇಕ್ಷಕರಿಗೆ ನಿರಾಸೆ ತಂದಿದೆ. ಇದೀಗ ಓಂ ಪ್ರಕಾಶ್ ಅವರು, ತಮ್ಮ ಹೆಲ್ತ್ ಇಶ್ಯೂಸ್ ಮತ್ತು ಶೋಗೆ ಮತ್ತೆ ಹೋಗೋ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ತಮ್ಮ ಆರೋಗ್ಯದ ಬಗ್ಗೆ ಕ್ಲಾರಿಟಿ ಕೊಟ್ಟಿರುವ ಓಂ ಪ್ರಕಾಶ್, “ನನಗೆ ಮೊದಲಿನಿಂದಲೂ ಬಿಪಿ, ಶುಗರ್ ಪ್ರಾಬ್ಲಮ್ ಇತ್ತು. ಶೋಗೆ ಹೋಗೋ ಮುಂಚೆಯೇ ನನ್ನ ವೈದ್ಯಕೀಯ ವರದಿಗಳನ್ನು ಬಿಗ್‌ಬಾಸ್ ಟೀಮ್‌ಗೆ ಕೊಟ್ಟಿದ್ದೆ. ಮನೆ ಒಳಗೆ ಹೋದಾಗ ಆರಂಭದಲ್ಲಿ ಏನೂ ತೊಂದರೆ ಇರಲಿಲ್ಲ. ಆದರೆ ದಿನ ಕಳಿತಾ ಇದ್ದಂತೆ ಕಾಲು ನೋವು ಶುರುವಾಯ್ತು. ಈ ಕಾಲು ನೋವು ನನಗೆ ಹಳೆ ಪ್ರಾಬ್ಲಮ್. ಆದ್ರೆ, ಶುಕ್ರವಾರ ಆಗೋಷ್ಟರಲ್ಲಿ ನೋವು ತಡೆಯೋಕೆ ಆಗದಷ್ಟು ಜಾಸ್ತಿಯಾಯ್ತು” ಎಂದು ಹೇಳಿದ್ದಾರೆ.

ಇಷ್ಟೊಂದು ನೋವಿದ್ದರೂ ಓಂ ಪ್ರಕಾಶ್ ಶೋ ಬಿಟ್ಟು ತಕ್ಷಣ ಆಚೆ ಬರಲಿಲ್ಲ. ಅದಕ್ಕೊಂದು ಬಲವಾದ ಕಾರಣ ಇತ್ತು. “ಶನಿವಾರ ಕಿಚ್ಚ ಸುದೀಪ್ ಅವರು ಬರ್ತಾರೆ. ಅವರ ಜೊತೆಗಿನ ಎಪಿಸೋಡ್ ಮಿಸ್ ಮಾಡ್ಕೋಬಾರದು ಅನ್ನೋ ಒಂದೇ ಕಾರಣಕ್ಕೆ ನಾನು ನೋವು ತಡೆದುಕೊಂಡು ಮನೆಯಲ್ಲೇ ಉಳಿದುಕೊಂಡೆ. ಶನಿವಾರ ಆಗುವಷ್ಟರಲ್ಲಿ ಕಾಲು ನೋವು ಜೊತೆಗೆ ಊತವೂ ಜಾಸ್ತಿಯಾಗಿತ್ತು. ಆಮೇಲೆ ನನಗಲ್ಲಿದ್ದು ತಡೆಯೋಕೆ ಆಗಲೇ ಇಲ್ಲ. ಬಿಗ್‌ಬಾಸ್ ಟೀಮ್‌ಗೆ ವಿಷಯ ತಿಳಿಸಿದೆ. ಅವರು ತಕ್ಷಣ ಬಂದು ಚೆಕ್ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಒಂದು ದಿನ ಚೆನ್ನಾಗಿ ಆರೈಕೆ ಮಾಡಿ ಚಿಕಿತ್ಸೆ ನೀಡಿದರು. ಆಮೇಲೆ ನಮ್ಮ ಫ್ಯಾಮಿಲಿ ಡಾಕ್ಟರ್ ಸಲಹೆ ಪಡೆದು, ನಮಗೆ ಅನುಕೂಲ ಇರುವ ಆಸ್ಪತ್ರೆಗೆ ಶಿಫ್ಟ್ ಆದೆವು” ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಎಲ್ಲರ ಮನಸ್ಸಿನಲ್ಲಿದ್ದ ‘ಮತ್ತೆ ಬಿಗ್‌ಬಾಸ್‌ಗೆ ಬರ್ತಾರಾ?’ ಅನ್ನೋ ಪ್ರಶ್ನೆಗೂ ಅವರು ಓಪನ್ ಆಗಿ ಉತ್ತರಿಸಿದ್ದಾರೆ. “ನಾನು ಬಿಗ್‌ಬಾಸ್ ಗೆಲ್ಲಲೇಬೇಕು ಎಂದು ಹೋಗಿದ್ದ ವ್ಯಕ್ತಿಯಲ್ಲ. ಅಗ್ರಿಮೆಂಟ್ ಪ್ರಕಾರ ವಾರದ ಸಂಭಾವನೆ ಕೊಟ್ಟರೆ ಸಾಕಾಗಿತ್ತು. ಯಾರ ಜೊತೆಯೂ ಗೆಲುವಿಗಾಗಿ ಕಿತ್ತಾಡೋ ಜಾತಕ ನಂದಲ್ಲ. ಈಗ ಅನಾರೋಗ್ಯದಿಂದ ಆಚೆ ಬಂದಿದ್ದೀನಿ. ಡಾಕ್ಟರ್‌ಗಳು ನನಗೆ 15 ದಿನ ಕಡ್ಡಾಯವಾಗಿ ಬೆಡ್ ರೆಸ್ಟ್ ತಗೋಬೇಕು ಎಂದು ಹೇಳಿದ್ದಾರೆ. ಅದಾದ ಮೇಲೆ ನಾನು ಹೇಗೆ ಗುಣಮುಖನಾಗಿದ್ದೀನಿ ಅನ್ನೋದನ್ನ ನೋಡ್ಕೊಂಡು, ಮತ್ತೆ ಶೋಗೆ ಹೋಗೋ ಬಗ್ಗೆ ನಿರ್ಧಾರ ಮಾಡ್ತೀನಿ” ಎಂದಿದ್ದಾರೆ.

ಒಟ್ಟಿನಲ್ಲಿ, ಓಂ ಪ್ರಕಾಶ್ ರಾವ್ ಅವರ ಎಂಟ್ರಿ ಮತ್ತೆ ಆಗುತ್ತಾ ಇಲ್ವಾ ಅನ್ನೋದು ಇನ್ನು 15 ದಿನಗಳ ನಂತರವೇ ಗೊತ್ತಾಗಲಿದೆ. ಅವರು ಬೇಗ ಗುಣಮುಖರಾಗಿ ಮತ್ತೆ ದೊಡ್ಮನೆಗೆ ಬರಲಿ ಎಂಬುದೇ ಅವರ ಅಭಿಮಾನಿಗಳ ಹಾರೈಕೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !