ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಯಾಲಿಟಿ ಶೋ ಅಂದಮೇಲೆ ಜಗಳ, ಕಿತ್ತಾಟ, ವಾದ-ವಿವಾದ ಎಲ್ಲವೂ ಕಾಮನ್ ಬಿಡಿ. ಆದ್ರೆ, ಕೆಲವೊಮ್ಮೆ ಸ್ಪರ್ಧಿಗಳು ಆವೇಶದಲ್ಲಿ ಆಡೋ ಮಾತುಗಳು ಇಡೀ ಶೋನ ಟ್ರೆಂಡ್ ಅನ್ನೇ ಬದಲಾಯಿಸಿಬಿಡುತ್ತವೆ. ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಕೆಲವೊಂದು ಪದಗಳನ್ನು ಬಳಸುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈಗ ಅದೇ ಹಳೆಯ ಇತಿಹಾಸ ಮತ್ತೆ ರಿಪೀಟ್ ಆಗಿದೆ.
ಮನೆಯಲ್ಲಿ ಟಾಸ್ಕ್ ನಡಿತಾ ಇರಬೇಕಾದರೆ ಗಲಾಟೆ ಕೊಂಚ ಜೋರಾಗಿಯೇ ಇತ್ತು. ಪ್ರತಿಯೊಬ್ಬರೂ ಗೆಲ್ಲಲೇಬೇಕು ಎಂದು ಪಟ್ಟು ಹಿಡಿದು ಆಡ್ತಿದ್ದರು. ಈ ಸಂದರ್ಭದಲ್ಲಿ ಕೋಪ ನೆತ್ತಿಗೇರಿದ ಕಿರಣ್ ಶಾಸ್ತ್ರಿ, ಸಹ-ಸ್ಪರ್ಧಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಾ ‘ಬಳೆ ಹಾಕಿಕೊಂಡು ಕೂತ್ಕೊಂಡು ಬಿಡಿ ಎಲ್ಲರೂ’ ಎಂದು ಗಟ್ಟಿಯಾಗಿ ಕಿರುಚಿದ್ದಾರೆ. ಈ ಮಾತು ಕೇಳಿದ್ದೇ ತಡ, ಇಡೀ ಬಿಗ್ ಬಾಸ್ ಮನೆ ಒಂದೇ ಕ್ಷಣದಲ್ಲಿ ಕೆಂಡದಂತಾಗಿದೆ.
ಹೆಣ್ಣುಮಕ್ಕಳು ಹಾಕಿಕೊಳ್ಳುವ ಬಳೆಯನ್ನು ಅಸಮರ್ಥತೆಗೆ ಅಥವಾ ಕೀಳಾಗಿ ಕಾಣುವ ರೀತಿಯಲ್ಲಿ ಬಳಸಿದ್ದಕ್ಕೆ ಮನೆಯಲ್ಲಿದ್ದ ಸ್ಪರ್ಧಿಗಳು ತಕ್ಷಣವೇ ತೀವ್ರ ಆಕ್ಷೇಪ ಎತ್ತಿದ್ದಾರೆ. ಹೆಣ್ಣಿನ ಅಸ್ಮಿತೆಗೆ ಧಕ್ಕೆ ತರುವಂತಹ ಈ ಮಾತನ್ನು ಕೇಳಿ ಕೋಪಗೊಂಡ ಗಗನ್, “ಬಳೆ ಹಾಕೊಂಡ್ರೆ ಏನು? ಬಳೆ ಹಾಕೊಂಡ್ರೆ ಏನು ತಪ್ಪು?” ಎಂದು ನೇರವಾಗಿಯೇ ಕಿರಣ್ ಶಾಸ್ತ್ರಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಇದರಿಂದಾಗಿ ಕೆಲ ಹೊತ್ತು ಮನೆಯಲ್ಲಿ ವಾತಾವರಣ ತೀವ್ರ ಉದ್ವಿಗ್ನಗೊಂಡಿತ್ತು.
ನಿಮಗೆ ನೆನಪಿರಬಹುದು, ಬಿಗ್ ಬಾಸ್ ಸೀಸನ್ 10ರಲ್ಲೂ ವಿನಯ್ ಗೌಡ ಇದೇ ‘ಬಳೆ’ ಪದವನ್ನು ಬಳಸಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ವಾರದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ವಿನಯ್‌ಗೆ ಸೂಪರ್ ಆಗಿ ಕ್ಲಾಸ್ ತೆಗೆದುಕೊಂಡಿದ್ದರು. “ಬಳೆ ಅನ್ನೋದು ಸ್ತ್ರೀ ಶಕ್ತಿಯ ಸಂಕೇತ. ಅದನ್ನು ಅಸಮರ್ಥತೆ ಅಥವಾ ದೌರ್ಬಲ್ಯದ ಸಂಕೇತವಾಗಿ ಬಳಸಬೇಡಿ” ಎಂದು ಇಡೀ ನಾಡಿಗೆ ನೆನಪಾಗುವಂತೆ ಕಟ್ಟುನಿಟ್ಟಾಗಿ ಎಚ್ಚರಿಸಿದ್ದರು.
ಸುದೀಪ್ ಅವರು ಅಷ್ಟೆಲ್ಲಾ ಸ್ಪಷ್ಟವಾಗಿ ಹೇಳಿದ್ದರೂ, ಕಿರಣ್ ಶಾಸ್ತ್ರಿ ಮತ್ತೆ ಅದೇ ಹಳೆಯ ತಪ್ಪನ್ನು ಪುನರಾವರ್ತಿಸಿದ್ದಾರೆ. “ಹಿಂದಿನ ಸೀಸನ್‌ಗಳನ್ನು ನೋಡಿ ಕಲಿಯಬೇಕಿದ್ದ ಕಿರಣ್, ಹೀಗೆ ನಾಲಿಗೆ ಜಾರಿ ಎಡವಟ್ಟು ಮಾಡಿಕೊಂಡಿದ್ದಾರಲ್ಲಪ್ಪಾ” ಎಂದು ಬಿಗ್ ಬಾಸ್ ವೀಕ್ಷಕರು ತಲೆಚಚ್ಚಿಕೊಳ್ಳುತ್ತಿದ್ದಾರೆ. ಈಗ ಎಲ್ಲರ ಕಣ್ಣು ಈ ವಾರದ ವೀಕೆಂಡ್ ಎಪಿಸೋಡ್ ಮೇಲಿದೆ. ತಪ್ಪು ಮಾಡಿದ ಕಿರಣ್ ಶಾಸ್ತ್ರಿಗೆ ಸುದೀಪ್ ಅವರು ಶನಿವಾರ-ಭಾನುವಾರ ಯಾವ ರೀತಿ ‘ಸ್ಪೆಷಲ್ ಕ್ಲಾಸ್’ ತಗೋತಾರೆ ಎಂದು ನೋಡೋಕೆ ಇಡೀ ಕರ್ನಾಟಕವೇ ಕಾತರದಿಂದ ಕಾಯ್ತಿದೆ!



