September 16, 2026
Wednesday, September 16, 2026
spot_img

ಮುಂಗಾರು ಕೈಕೊಟ್ಟಿದ್ದಕ್ಕೆ ಕರೆಂಟ್‌ ಶಾಕ್‌: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಲೋಡ್‌ಶೆಡ್ಡಿಂಗ್‌

  • ಎಸ್. ರುದ್ರೇಶ್ವರ


ಹೊಸದಿಗಂತ ವರದಿ ರಾಮನಗರ :

ಮುಂಗಾರು ಮಳೆ ಕೈಕೊಟ್ಟ ಬೆನ್ನಲ್ಲೇ ಅಘೋಷಿಕ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ರಾತ್ರಿಯ ವೇಳೆ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 30 ನಿಮಿಷಗಳಿಂದ ಒಂದು ತಾಸುಗಳ ವರೆಗೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ.

ಲೋಡ್ ಶೆಡ್ಡಿಂಗ್ ಸಂಬಂಧ ಬೆಸ್ಕಾರಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಕಳೆದ ಐದಾರು ದಿನಗಳಿಂದ ಜಿಲ್ಲೆಯಲ್ಲಿ ವಿದ್ಯುತ್ ಕಡಿತ ಆರಂಭವಾಗಿದೆ. ಅತಿಹೆಚ್ಚು ವಿದ್ಯುತ್ ಬಳಕೆಯಾಗುವ ಸಮಯದಲ್ಲೇ ವಿದ್ಯುತ್ ಕಡಿತವಾಗುತ್ತಿರುವುದು ಜನತೆಯ ಬೇಸರಕ್ಕೆ ಎಡೆಮಾಡಿಕೊಟ್ಟಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ9 ಗಂಟೆಯ ವರೆಗೆ ಪಾಳಿಯ ಮೇಲೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬೆಸ್ಕಾಂ ವಿದ್ಯುತ್ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಫೀರ್ಡ ( ವಿದ್ಯುತ್ ಸಂಪರ್ಕದ ಮಾರ್ಗ)ಗಳನುಸಾರ ಮಾಡಲಾಗುತ್ತಿದೆ. ಪ್ರತಿಪೀಡರ್‌ನಲ್ಲಿ 30 ನಿಮಿಷಗಳಿಂದ ಒಂದು ತಾಸಿನ ವರೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ.

ಮಳೆಗಾಲದಲ್ಲೇ ವಿದ್ಯುತ್ ಕಡಿತ ಆರಂಭವಾಗಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದು, ಮಳೆಗಾಲದ ಸಮಯದಲ್ಲೇ ಹೀಗಾದರೆ ಮುಂದಿನ ಬೇಸಿಗೆಯಲ್ಲಿ ಪರಿಸ್ಥಿತಿ ಹೇಗೆ ಎಂದು ಆತಂಕಗೊಂಡಿದ್ದಾರೆ. ಬೆಸ್ಕಾಂ ಲೋಡ್ ಶೆಡ್ಡಿಂಗ್ ಸಂಬಂಧ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಲೋಡ್ ಶೆಡ್ಡಿಂಗ್ ಆರಂಭವಾಗಿದ್ದು, ಜನತೆಗೆ ಅಗತ್ಯವಿರುವ ಸಮಯದಲ್ಲೇ ಕತ್ತಲೆಯಲ್ಲಿ ಜನತೆ ಕೂರುವಂತಾಗಿದೆ. ರೈತರ ಪಂಪ್‌ ಸೆಟ್ ಗಳಿಗೆ ಪೂರೈಕೆ ಮಾಡುವ ವಿದ್ಯುತ್ ನಲ್ಲಿ ವ್ಯತ್ಯಯವಾಗುತ್ತಿದ್ದು, ಹಗಲು 4 ತಾಸು ರಾತ್ರಿ 3 ತಾಸು ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ. ಆದರೆ, ರೈತರ ಕೊಳವೆ ಬಾವಿಗೆ ನೀಡುವ ವಿದ್ಯುತ್ ಆಗಾಗ ಸಂಪರ್ಕ, ಕಡಿತವಾಗುವುದು ಸಮರ್ಪಕವಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕಪಡಿಸಿದ್ದಾರೆ.

ರೈತರ ಪಂಪ್‌ಸೆಟ್‌ಗಳಿಗೆ ನೀಡುವ ವಿದ್ಯುತ್‌ನಲ್ಲಿ ಯಾವುದೇ ವ್ಯತ್ಯವಾಗುತ್ತಿಲ್ಲ. ದಿನದ 7 ತಾಸು ವಿದ್ಯುತ್ ನೀಡಲಾಗುತ್ತಿದೆ. ವಿದ್ಯುತ್ ಮಾರ್ಗದಲ್ಲಿ ಸಮಸ್ಯೆ ಯಾಗಿ ಕಡಿತವಾಗಿದ್ದಲ್ಲಿ ತದನಂತರ ಬಾಕಿ ಸಮಯದೆ ವಿದ್ಯುತ್ ಪೂರೈಕೆಮಾಡಿ ಸಮಸ್ಯೆ ಸರಿಪಡಿಸಲಾಗುತ್ತಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.

ಅಘೋಷಿತ ಲೋಡ್‌ ಶೆಡ್ಡಿಂಗ್‌ಗೆ ಮಳೆಯ ಕೊರತೆಯಿಂದಾಗಿ ಜಲವಿದ್ಯುತ್ಗಾರಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿರುವುದು ಕಾರಣ ಎಂದು ಬೆಸ್ಕಾಂ ಮೂಲಗಳು ಮಾಹಿತಿ ನೀಡುತ್ತಿವೆ. ರಾಜ್ಯ ವಿದ್ಯುತ್ ಪ್ರಸರಣ ನಿಗಮ ವಿದ್ಯುತ್ ಉಪಕೇಂದ್ರಗಳಿಗೆ ಲೋಡ್ ಸಂಬಂಧ ಸಲಹೆ ಸೂಚನೆಯನ್ನು ನೀಡುತ್ತಿದ್ದು ಅದನ್ನು ಆದರಿಸಿ ಲೋಡ್‌ ಶೆಡ್ಡಿಂಗ್ ಅನ್ನು ಅನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಬೆಸ್ಕಾಂ ಮೂಲಗಳು ಮಾಹಿತಿ ನೀಡಿವೆ.

ಪ್ರತಿದಿನ ಕೆಪಿಟಿಸಿಎಲ್ ಯಾವುದೇ ಮುನ್ಸೂಚನೆ ನೀಡದೆ ಉತ್ಪಾದನೆಯಾಗುವ ವಿದ್ಯುತ್ ಪ್ರಮಾಣವನ್ನು ಆದರಿಸಿ ವಿದ್ಯುತ್ ಕಡಿತದ ಸೂಚನೆಯನ್ನು ನೀಡುತ್ತಿದೆ. ಹೀಗಾಗಿ ಲೋಡ್ ಶೆಡ್ಡಿಂಗ್ ಬಗ್ಗೆ ಯಾವುದೇ ಪೂರ್ವಬಾವಿ ಸೂಚನೆಯನ್ನು ಗ್ರಾಹಕರಿಗೆ ನೀಡಲಾಗುತ್ತಿಲ್ಲ. ಅತಿಹೆಚ್ಚು ವಿದ್ಯುತ್ ಬಳಕೆ ರಾತ್ರಿ 7 ಗಂಟೆಯಿಂದ ಗಂಟೆಯ ವರೆಗೆ ಇದ್ದು ಈ ಅವಧಿಯಲ್ಲಿ ಹಂತ ಹಂತವಾಗಿ ಲೋಡ್‌ ಶೆಡ್ಡಿಂಗ್ ಮಾಡಲಾಗುತ್ತಿದೆ ಎಂದು ಎನ್ನುತ್ತಾರೆ ಬೆಸ್ಕಾಂ ಅಧಿಕಾರಿಗಳು.

ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲೂ ವಿದ್ಯುತ್ ಕೊರತೆ ಎದುರಾಗಿದ್ದು ಹಗಲಿನ ವೇಳೆ ಸೋಲಾರ್‌ ಮೂಲಕ ವಿದ್ಯುತ ಲಭ್ಯವಾಗುವ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಿರುವ ಸಮಸ್ಯೆಯಾಗುತ್ತಿಲ್ಲ. ಆದರೆ, ರಾತ್ರಿವೇಳೆ ವಿದ್ಯುತ್ ಪೂರೈಕೆಮಾಡಲು ಅಗತ್ಯವಿರುವ ಪ್ರಮಾಣದ ವಿದ್ಯುತ್ ಸರಬರಾಜಾಗುತ್ತಿಲ್ಲ. ಜಲ ವಿದ್ಯುತ್ ಗಾರಗಳಲ್ಲಿ ಮಳೆಯ ಕೊರತೆಯಿಂದ ಉತ್ಪಾದನೆ ಕುಸಿತಗೊಂಡಿದೆ. ಇದರೊಂದಿಗೆ ಹೆಚ್ಚಿನ ಶಾಖೋತ್ಪನ್ನ ವಿದ್ಯುತ್ ಮತ್ತು ಪವನ ವಿದ್ಯುತ್ ಉತ್ಪಾದನೆಯಲ್ಲೂ ಸಮಸ್ಯೆಯಾಗಿರುವುದು ವಿದ್ಯುತ್ ಕೊರತೆಗೆ ಕಾರಣವಾಗಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕದಲ್ಲಿ ಸಮಸ್ಯೆಯಾಗಿದ್ದು, ಇನ್ನೊಂದು ವಾರದಲ್ಲಿ ಸಮಸ್ಯೆ ಸರಿಹೋಗಲಿದೆ. ಅಲ್ಲಿಯವರೆಗೆ ವಿದ್ಯುತ್ ಸಮಸ್ಯೆ ಮುಂದುವರೆಯಲಿದೆ ಎಂದು ಕೆಲ ಮೂಲಗಳು ಮಾಹಿತಿ ನೀಡಿವೆ.

ವಿದ್ಯುತ್‌ ಪೂರೈಕೆಯನ್ನು ಆದರಿಸಿ ಲೋಡ್ ಶೆಡ್ಡಿಂಗ್ ಅನ್ನು ಮಾಡಲಾಗುತ್ತಿದೆ. ಕೆಪಿಟಿಸಿಎಲ್ ಸೂಚನೆಯ ಮೇರೆಗೆ ಆಯಾ ವಿದ್ಯುತ್ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಲೋಡ್‌ ಶೆಡ್ಡಿಂಗ್ ಮಾಡಿ ಹೊಂದಾಣಿಕೆ ಮಾಡಲಾಗುತ್ತಿದೆ. ಮಳೆ ಕೊರತೆಯಿಂದ ಜಲವಿದ್ಯುತ್ ಉತ್ಪಾದನೆಯಾಗದಿರುವುದು, ಥರ್ಮಲ್ ವಿದ್ಯುತ್ ಮತ್ತು ಪವನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದು ಇದಕ್ಕೆ ಕಾರಣ. ಲೋಡ್ ಶೆಡ್ಡಿಂಗ್ ಸಂಬಂಧ ಯಾವುದೇ ಶೆಡ್ಯೂಲ್ಡ್ ಆಗಿಲ್ಲ. ಸದ್ಯದಲ್ಲೇ ಸಮಸ್ಯೆ ಸರಿಹೋಗುವ ವಿಶ್ವಾಸವಿದೆ ಎಂದು ಬೆಸ್ಕಾಂ ಕಾರ್ಯಪಾಲಯ ಅಭಿಯಂತರ ಜಿತೇಂದ್ರ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !