ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದ್ದು, ಇ-ಕೆವೈಸಿ ಗಡುವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಎದುರಾಗುತ್ತಿರುವ ತೀವ್ರ ಸರ್ವರ್ ಸಮಸ್ಯೆಯಿಂದಾಗಿ ಇ-ಕೆವೈಸಿಗೆ ಅಡಚಣೆ ಉಂಟಾದ ಹಿನ್ನೆಲೆ ಪಡಿತರ ಇ-ಕೆವೈಸಿ ಅವಧಿ ವಿಸ್ತರಣೆ ಮಾಡಿ ಸರ್ಕಾರ ಅದೇಶ ಹೊರಡಿಸಿದೆ. ಅಕ್ಟೋಬರ್ 20ರವರೆಗೆ ಅವಧಿ ವಿಸ್ತರಿಸಿದ ಸರ್ಕಾರ, ನ್ಯಾಯಬೆಲೆ ಅಂಗಡಿಗಳ ಸಮಯದಲ್ಲೂ ಬದಲಾವಣೆ ಮಾಡಿದೆ. ರಾಜ್ಯದಲ್ಲಿ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪೂರ್ಣಗೊಳಿಸಲು ಅಕ್ಟೋಬರ್ 20ರವರೆಗೆ ಕಾಲಾವಕಾಶ ನೀಡಿ ಡೆಡ್ಲೈನ್ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಸೆಪ್ಟೆಂಬರ್ 30ರೊಳಗೆ ಪಡಿತರ ಚೀಟಿ ಇ-ಕೆವೈಸಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಇದೀಗ ಸದ್ಯ ಗಡುವು ವಿಸ್ತರಣೆ ಮಾಡಿ ಅಕ್ಟೋಬರ್ 20ರವರೆಗೆ ಕಾಲಾವಕಾಶ ನೀಡಲಾಗಿದೆ.
ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಜನರು ಪರದಾಡುತ್ತಿರುವ ವಿಚಾರ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ಜನರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನ್ಯಾಯಬೆಲೆ ಅಂಗಡಿಗಳಲ್ಲಿ ಉಂಟಾಗಿರೋ ಸರ್ವರ್ ಸಮಸ್ಯೆಗೆ ಜನಸಾಮಾನ್ಯರು ಕಂಗಾಲಾಗಬೇಕಿಲ್ಲ, ಇ-ಕೆವೈಸಿ ಗಡುವನ್ನ ಅಕ್ಟೋಬರ್ 20 ರವರೆಗೆ ವಿಸ್ತರಣೆ ಮಾಡಿರೋದಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.



