November 1, 2026
Sunday, November 1, 2026
spot_img

ಬೃಹತ್ ‘ಮಹಾಧನ್ವಂತರಿ ಯಾಗ’ಕ್ಕೆ ಸಜ್ಜಾಗುತ್ತಿದೆ ಪೊಡವಿಗೊಡೆಯನ ನಾಡು: ಆಮಂತ್ರಣ, ವೆಬ್‌ಸೈಟ್ ಅನಾವರಣ, ಮನೆ-ಮನೆ ಪ್ರಚಾರಕ್ಕೆ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರೋಗ್ಯ ಸಂಪನ್ನ ಮತ್ತು ಸುರಕ್ಷಿತ ಭಾರತ ನಿರ್ಮಾಣ ಸನಾತನ ಸಂಸ್ಥೆಯ ಸಾರಥ್ಯದಲ್ಲಿ ನ. 29 ರಂದು ಉಡುಪಿಯ ಎಂಜಿಎಂ ಮೈದಾನದಲ್ಲಿ ‘ಮಹಾಧನ್ವಂತರಿ ಯಾಗ’ದ ಆಯೋಜನೆಯಾಗಿದ್ದು, ಭರದ ಸಿದ್ಧತೆ ನಡೆಯುತ್ತಿದೆ.

ಕಾರ್ಯಕ್ರಮದ ಪೂರ್ವಭಾವಿಯಾಗಿ ಉಡುಪಿಯ ಬೀಡಿನಗುಡ್ಡೆಯ ಯಕ್ಷಗಾನ ಕಲಾರಂಗದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಯಾಗದ ಡಿಜಿಟಲ್ ಹಾಗೂ ಮುದ್ರಣ ಮಾಧ್ಯಮದ ಪ್ರಮುಖ ಸಾಹಿತ್ಯಗಳ ಅನಾವರಣ ಕಾರ್ಯಕ್ರಮವು ನೆರವೇರಿತು.

ಸಭೆಯಲ್ಲಿ 100ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದು, ಯಾಗವನ್ನು ಭಕ್ತಿಯಿಂದ ಸಂಘಟಿಸುವ ಸಂಕಲ್ಪ ತೊಟ್ಟರು. ಇದೇ ಸಭೆಯಲ್ಲಿ ಯಾಗದ ಸ್ವಾಗತ ಸಮಿತಿಯ ರಚನೆ ಮತ್ತು ಪ್ರಚಾರದ ನೀಲನಕ್ಷೆಯ ಚರ್ಚೆಯಾಯಿತು.

ಸನಾತನ ಸಂಸ್ಥೆಯ 75ನೇ ಧರ್ಮಪ್ರಚಾರಕ ಸಂತರಾದ ರಮಾನಂದ ಗೌಡ, ಯಾಗದ ಸ್ವಾಗತ ಸಮಿತಿಯ ಅಧ್ಯಕ್ಷ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಜಯ್ ಕೊಡವೂರು ಹಾಗೂ ಆಯೋಜನ ಸಮಿತಿಯ ಗುರುಪ್ರಸಾದ್ ಗೌಡ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಪ್ರಚಾರ ಸಾಹಿತ್ಯಗಳ ಲೋಕಾರ್ಪಣೆ ಮಾಡಿದರು.

ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಜಯ್ ಕೊಡವೂರು, ಯಾಗದ ವಿವಿಧ ಕಾರ್ಯವಿಭಾಗಗಳ ಜವಾಬ್ದಾರಿಗಳನ್ನು ಅಧಿಕೃತವಾಗಿ ಘೋಷಿಸಿದರು. ಶಾಸಕ ಯಶ್‌ಪಾಲ್ ಸುವರ್ಣ, ಮಹಾಧನ್ವಂತರಿ ಯಾಗವು ನಾಡಿಗೆ ಆರೋಗ್ಯ, ಶಾಂತಿ ಮತ್ತು ಸಾತ್ತ್ವಿಕತೆಯನ್ನು ಕರುಣಿಸುವ ದಿವ್ಯ ಕಾರ್ಯಕ್ರಮವಾಗಿದ್ದು, ಸಮಾಜದ ಸರ್ವ ಧರ್ಮಪ್ರೇಮಿಗಳೂ ಒಗ್ಗಟ್ಟಿನಿಂದ ಶ್ರಮಿಸಿ ಯಾಗವನ್ನು ವಿಜೃಂಭಣೆಯಿಂದ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಆಯೋಜನ ಸಮಿತಿಯ ಗುರುಪ್ರಸಾದ್ ಗೌಡ ಮಾತನಾಡಿ, ಇತಿಹಾಸದಲ್ಲೇ ಮೊದಲ ಬಾರಿ ಉಡುಪಿಯಲ್ಲಿ ನಡೆಯಲಿರುವ ಈ ಯಾಗದಲ್ಲಿ ಸುಮಾರು 10,000 ಭಕ್ತರು ಒಂದೆಡೆ ಸೇರಲಿದ್ದಾರೆ. ಅಷ್ಟೇ ಅಲ್ಲದೆ ಯಾಗದ ನಿಮಿತ್ತ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಉಡುಪಿಯ ನಗರಕ್ಕೆ ಪಾದರ್ಪಣೆ ಮಾಡಲಿವೆ. ಭಗವಾನ್ ಶ್ರೀಕೃಷ್ಣನ ಪವಿತ್ರ ನಗರಿ ದ್ವಾರಕೆ ಮತ್ತು ಮಥುರೆಯ ಸಂರಕ್ಷಿತ ವಸ್ತುಗಳು ಸಹ ಭಕ್ತರಿಗೆ ದರ್ಶನಕ್ಕೆ ಲಭಿಸಲಿವೆ ಎಂದು ಯಾಗದ ವೈಶಿಷ್ಟ್ಯವನ್ನು ತಿಳಿಸಿದರು.

ಮಹಾಯಾಗದ ಸ್ವಾಗತ ಸಮಿತಿ ರಚನೆಯೊಂದಿಗೆ ಯಾಗದ ಮನೆ-ಮನೆ ಪ್ರಚಾರ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಈ ಬೃಹತ್ ಮಹಾಧನ್ವಂತರಿ ಯಾಗಕ್ಕೆ ಸಮಾಜದ ಸರ್ವ ಶ್ರದ್ಧಾಳುಗಳು ಕುಟುಂಬ ಸಮೇತರಾಗಿ ಆಗಮಿಸಿ, ಧನ್ವಂತರಿ ದೇವರ ದಿವ್ಯ ಕೃಪೆ ಹಾಗೂ ಸಾತ್ತ್ವಿಕ ಚೈತನ್ಯವನ್ನು ಪಡೆದುಕೊಳ್ಳಬೇಕಾಗಿ ಸನಾತನ ಸಂಸ್ಥೆ ಹಾಗೂ ಆಯೋಜನಾ ಸಮಿತಿ ವಿನಂತಿಸಿದೆ.

Must Read

Skip to toolbar