ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಫೇಮಸ್ Olympia coffe houseನ ಫ್ರಿಡ್ಜ್ನೊಳಗೆ ರಕ್ತದ ಕಲೆ ಹಾಗೂ ಅಡುಗೆ ಸಾಮಾಗ್ರಿಗಳು ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡಿರುವುದು ಕಂಡುಬಂದಿದ್ದು, ಈವರೆಗೂ ಇಲ್ಲಿ ಕಾಫಿ ಸೇವಿಸಿ, ತಿಂಡಿ ತಿಂದಿರುವ ಜನರು ಹೆಲ್ತ್ ಚೆಕಪ್ಗೆ ಹೋಗುವ ಪರಿಸ್ಥಿತಿ ಬಂದಿದೆ!
ಹೌದು, ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ನೂರು ವರ್ಷ ಹಳೆಯ ಒಲಿಂಪಿಯಾ ಕಾಫಿ ಹೌಸ್ನಲ್ಲಿ ಗಂಭೀರ ನೈರ್ಮಲ್ಯ ಲೋಪ ಎದುರಾಗಿದೆ. ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಹೊಟೇಲ್ನ ಸ್ಥಿತಿ ಕಂಡು ಶಾಕ್ ಆಗಿದ್ದು, ತಕ್ಷಣದಿಂದಲೇ ಲೈಸೆನ್ಸ್ ಕ್ಯಾನ್ಸಲ್ ಮಾಡಿದೆ. ಹಾಲಿವುಡ್ ನಟರಾದ ಟಾಮ್ ಹಾಲೆಂಡ್, ಮ್ಯಾಟ್ ಡ್ಯಾಮನ್ ಮತ್ತು ನೋಲನ್ ಇಲ್ಲಿ ಕಾಫಿ ಕುಡಿದು ಸಂಭ್ರಮಿಸಿದ್ದರು. ಇದೀಗ ಈ ಐತಿಹಾಸಿಕ ಕಾಫಿ ಬಾರ್ಗೆ ಬೀಗ ಬಿದ್ದಿದೆ.

ಸಡನ್ ಆಗಿ ಅಧಿಕಾರಿಗಳು ಹೊಟೇಲ್ ಮೇಲೆ ದಾಳಿ ನಡೆಸಿದ್ದು, ಆಹಾರ ಸಂಗ್ರಹ ಮಾಡಿದ ಪಕ್ಕದಲ್ಲೇ ಮೂತ್ರ ವಿಸರ್ಜನೆಯಿಂದಾಗಿ ಅಸಹ್ಯಕರ ವಾಸನೆ ಮೂಡಿದ್ದನ್ನು ಗಮನಿಸಿದ್ದಾರೆ. ಕ್ಷಣಕಾಲ ಸುಲಭ ಶೌಚಾಲಯವೋ ಅಥವಾ ಅಡುಗೆ ಮನೆಯೋ ಎನ್ನುವುದೇ ಗೊತ್ತಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಫ್ರಿಡ್ಜ್ ತೆಗೆದು ನೋಡಿದಾಗ ಹಸಿ ಮಾಂಸದ ರಕ್ತದ ಕಲೆಗಳು ಎದ್ದು ಕಾಣಿಸಿವೆ.
ಆಹಾರ ಪದಾರ್ಥಗಳನ್ನು ನೆಲದ ಮೇಲೆಯೇ ಇಟ್ಟಿರುವುದು, ಪಾತ್ರೆ ತೊಳೆಯುವ ಜಾಗ ಗಬ್ಬು ನಾರುತ್ತಿರುವುದು, ನೂರಾರು ಜಿರಳೆ, ನೊಣ, ಕೆಟ್ಟ ನೀರು, ಸಿಬ್ಬಂದಿಗೂ ಆಹಾರ ಸುರಕ್ಷತಾ ತರಬೇತಿ ಇಲ್ಲದಿರುವುದು ಗೊತ್ತಾಗಿದೆ. ಈ ಹೊಟೇಲ್ನಲ್ಲಿ ಆಹಾರ ಖರೀದಿ, ತಯಾರಿ ಹಾಗೂ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿದೆ.
ನಮ್ಮಪ್ಪನ ಕಾಲದಿಂದಲೂ ಇದೇ ಹೊಟೇಲ್ನಲ್ಲಿ ತಿಂದಿದ್ದೇವೆ. ಇಷ್ಟೊಂದು ಅಸಹ್ಯಕರ ಪರಿಸ್ಥಿತಿ ಇರೋದು ಗೊತ್ತಾಗಿ ವಾಕರಿಕೆ ಬರುತ್ತಿದೆ. ನಮ್ಮ ಹೆಲ್ತ್ ಕಥೆ ಏನಾಗಿದೆಯೋ ಗೊತ್ತಿಲ್ಲ. ಪಡೆಯುವ ಕಾಸಿಗೆ ಲಾಯಕ್ಕಾದ ಊಟ ತಿಂಡಿ ಮಾಡದ ಜಾಗಗಳೆಲ್ಲವೂ ಬಂದ್ ಆಗಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.



