September 18, 2026
Friday, September 18, 2026
spot_img

ರಾಜ್ಯದಲ್ಲಿ ಮತ್ತೆ ಹಾಲಿನ ದರ ಏರಿಕೆ ಬರೆ? ಲೀಟರ್‌ಗೆ 8 ರೂ. ಹೆಚ್ಚಿಸುವಂತೆ ಹಾಲು ಉತ್ಪಾದಕರ ಒಕ್ಕೂಟಗಳ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ರಾಜ್ಯದ ಜನಸಾಮಾನ್ಯರ ಜೇಬಿಗೆ ಮತ್ತೊಂದು ಬರೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಬಮೂಲ್, ಚಮೂಲ್, ಮಂಡ್ಯ ಹಾಗೂ ತುಮಕೂರು ಸೇರಿದಂತೆ ಕರ್ನಾಟಕದ ಎಲ್ಲಾ 16 ಹಾಲು ಉತ್ಪಾದಕರ ಒಕ್ಕೂಟಗಳು ಒಗ್ಗೂಡಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಬರೋಬ್ಬರಿ 8 ರೂಪಾಯಿ ಹೆಚ್ಚಿಸುವಂತೆ ಸರ್ಕಾರದ ಮುಂದೆ ಕಟ್ಟುನಿಟ್ಟಿನ ಬೇಡಿಕೆ ಇಟ್ಟಿವೆ.

ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಮೂಲ್ ಹಾಲು ಒಕ್ಕೂಟದ ಅಧ್ಯಕ್ಷ, ಕಳೆದ ಎಂಟು ತಿಂಗಳಿನಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಹಾಲು ಉತ್ಪಾದನೆ ಕುಂಠಿತಗೊಳ್ಳಲು ಕಾರಣಗಳೇನು?

ಇಡೀ ಭಾರತದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿರುವುದು ನಮ್ಮ ಹೆಮ್ಮೆಯ ‘ನಂದಿನಿ’ ಹಾಲು ಮಾತ್ರ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಅದೇ ರೈತರಿಗೆ ತೀವ್ರ ನಷ್ಟ ತಂದಿಡುತ್ತಿದೆ ಎಂದು ಒಕ್ಕೂಟಗಳು ಕಳವಳ ವ್ಯಕ್ತಪಡಿಸಿವೆ.  

ರಾಜ್ಯದಲ್ಲಿ ಶೇಕಡಾ 70ರಷ್ಟು ಮಳೆ ಕೊರತೆಯಾಗಿದ್ದು, ಹಸುಗಳಿಗೆ ಮೇವಿನ ಅಭಾವ ಸೃಷ್ಟಿಯಾಗಿದೆ. ಅದರ ಜತೆ ಹಿಂಡಿ, ಬೂಸಾ, ಮೆಕ್ಕೆಜೋಳ ಹಾಗೂ ಕಾಕಂಬಿಯ ದರವೂ ಶೇ. 25ರಷ್ಟು ದುಬಾರಿಯಾಗಿದೆ. ಇದರೊಂದಿಗೆ ರಾಸುಗಳ ನೆಲಹಾಸಿನ ವೆಚ್ಚವೂ ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಕಚ್ಚಾ ತೈಲ ಹಾಗೂ ಇಂಧನ ದರಗಳು ಹೆಚ್ಚಾಗಿದ್ದು, ಆದ್ದರಿಂದ ಹಾಲಿನ ಸಾಗಣೆ ವೆಚ್ಚ ಗಗನಕ್ಕೇರಿದೆ.

ಈ ಎಲ್ಲಾ ಕಾರಣಗಳಿಂದಾಗಿ ಈ ಹಿಂದೆ ದಿನಕ್ಕೆ 1 ಕೋಟಿ 11 ಲಕ್ಷ ಲೀಟರ್ ಆಗುತ್ತಿದ್ದ ಹಾಲು ಉತ್ಪಾದನೆ, ಈಗ 1 ಕೋಟಿ 5 ಲಕ್ಷ ಲೀಟರ್‌ಗೆ ಕುಸಿದಿದೆ. ಅಂದರೆ ಪ್ರತಿದಿನ 5 ಲಕ್ಷ ಲೀಟರ್ ಹಾಲಿನ ಕೊರತೆ ಉಂಟಾಗುತ್ತಿದೆ ಎಂದು ವಿವರಿಸಿದರು.

ಇದನ್ನೂ ಓದಿ:

ಸರ್ಕಾರಕ್ಕೆ 3 ದಿನಗಳ ಗಡುವು

ರೈತರು ಸಾಲಸೋಲ ಮಾಡಿ ಹೆಚ್ಚು ಖರ್ಚಿನಲ್ಲಿ ಹಾಲು ಉತ್ಪಾದಿಸುತ್ತಿದ್ದಾರೆ. ಆದರೆ ಅವರಿಗೆ ಸಿಗುತ್ತಿರುವ ಬೆಲೆ ತೀರಾ ಕಡಿಮೆ. ಹೀಗೇ ಮುಂದುವರಿದರೆ ರೈತರು ಹೈನುಗಾರಿಕೆಯನ್ನೇ ಬಿಡಬೇಕಾಗುತ್ತದೆ ಎಂದು ಅಧ್ಯಕ್ಷರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ದರವನ್ನು 8 ರೂಪಾಯಿ ಹೆಚ್ಚಿಸಬೇಕು ಹಾಗೂ ರೈತರಿಗೆ ಸಿಗುವ ಪ್ರೋತ್ಸಾಹ ಧನವನ್ನೂ 5 ರೂ.ನಿಂದ 8 ರೂಪಾಯಿಗೆ ಏರಿಸಬೇಕು ಎಂದು ಆಗ್ರಹಿಸಲಾಗಿದೆ.

ಸರ್ಕಾರಕ್ಕೆ 3 ದಿನಗಳ ಅಂತಿಮ ಗಡುವು ನೀಡಿರುವ ಒಕ್ಕೂಟಗಳು, ತಕ್ಷಣವೇ ತುರ್ತು ಕ್ಯಾಬಿನೆಟ್ ಸಭೆ ಕರೆದು ದರ ಏರಿಕೆಯ ನಿರ್ಧಾರ ಪ್ರಕಟಿಸಬೇಕು, ಇಲ್ಲದಿದ್ದರೆ ಇಡೀ ರಾಜ್ಯದ ರೈತರು ಒಟ್ಟಾಗಿ ‘ವಿಧಾನಸೌಧ ಚಲೋ’ ನಡೆಸಿ ಮುತ್ತಿಗೆ ಹಾಕಲಿದ್ದಾರೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !