ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿರುವ ನಟ ಅನಂತ್ ನಾಗ್ ಇನ್ಮುಂದೆ ಬಣ್ಣ ಹಚ್ಚೋದಿಲ್ಲ ಎಂದು ಹೇಳಿದ್ದಾರೆ.
ಹೌದು, ವರ್ಷಗಳಿಂದ ನಟನೆ ಮಾಡಿಕೊಂಡು ಬಂದಿರುವ ಅನಂತ್ ನಾಗ್ ಅವರನ್ನು ತೆರೆ ಮೇಲೆ ನೋಡೋದು ಕಣ್ಣಿಗೆ ಹಬ್ಬವೇ. ಆದರೆ ಈಗಿನ ಸಿನಿಮಾಗಳ ಕ್ವಾಲಿಟಿಯನ್ನು ನೋಡಿದರೆ ನನಗೆ ನಟನೆಯ ಮನಸ್ಸು ಆಗೋದಿಲ್ಲ ಎಂದು ಅನಂತ್ ನಾಗ್ ಖಡಕ್ ಆಗಿ ಹೇಳಿದ್ದಾರೆ. ನಾವು ಮಾಡುತ್ತಿದ್ದ ಸಿನಿಮಾಗಳು ಹೇಗಿದ್ದವು? ಅದಕ್ಕೊಂದು ಕಥೆ, ತೂಕ, ಗುಣಮಟ್ಟ ಇತ್ತು. ಈಗಿನ ಸಿನಿಮಾಗಳಲ್ಲಿ ಜೀವವೇ ಇಲ್ಲ. ಕಳಪೆ ಗುಣಮಟ್ಟದ, ಕೆಟ್ಟ ಕಥೆಗಳ ಸಿನಿಮಾದಲ್ಲಿ ಭಾಗಿಯಾಗೋಕೆ ಇಷ್ಟವಿಲ್ಲ ಎಂದಿದ್ದಾರೆ.
ಈಗಿನ ಸಿನಿಮಾಗಳಲ್ಲಿ ಹೀರೋಗಳೇ ಕಥೆ, ನಮ್ಮ ಕಾಲದಲ್ಲಿ ಕಥೆಗಳೇ ಹೀರೋ! ಇಂಥ ವಿಷಯ ಆಧಾರಿತ ಸಿನಿಮಾಗಳು ಈಗ ತೆರೆ ಮೇಲೆ ಬರುತ್ತಿಲ್ಲ. ನಾನು ಅಭಿನಯ ಮಾಡಿರುವ ಕಡೆಯ ಐದು ಸಿನಿಮಾಗಳು ಫ್ಲಾಪ್ ಆಗಿವೆ. ಆಗೇ ಅಂದುಕೊಂಡೆ ಇನ್ನೆಂದೂ ಬಣ್ಣ ಹಚ್ಚೋದಿಲ್ಲ ಎಂದು. ನಟನೆಯನ್ನು ಇಲ್ಲಿಗೇ ಬಿಟ್ಟುಬಿಡುತ್ತೇನೆ. ನನ್ನ ನಟನಾ ಸಮಯ ಮುಗಿಯಿತು ಎಂದು ಹೇಳಿದ್ದಾರೆ.
ನನ್ನ ಆರೋಗ್ಯ ಚೆನ್ನಾಗಿದೆ, ನಟನೆ ಮಾಡೋದಕ್ಕೆ ನನ್ನ ದೇಹ ಎಂದಿಗೂ ಅಡ್ಡಿ ಮಾಡಿಲ್ಲ. ಈಗಿನ ಕಥೆಗಳು, ಸಿನಿಮಾಗಳು ನನಗೆ ನಟನೆ ಮಾಡುವಷ್ಟು ಇಷ್ಟವಾಗಿಲ್ಲ ಎಂದು ನೇರವಾಗಿ ನುಡಿದಿದ್ದಾರೆ.



