September 18, 2026
Friday, September 18, 2026
spot_img

ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೇಕರಿ ಉದ್ಘಾಟನೆ: ಕೈದಿಗಳಿಗೆ ತರಬೇತಿ, ಆದಾಯ ಹೆಚ್ಚಳಕ್ಕೆ ಪ್ಲ್ಯಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಪ್ಪು ಮಾಡಿ ಜೈಲು ಸೇರಿದ ತಕ್ಷಣ ಬದುಕು ಮುಗಿದುಹೋಗುವುದಿಲ್ಲ, ಬದಲಿಗೆ ಅಲ್ಲಿಂದಲೇ ಬದುಕಲು ಹೊಸದೊಂದು ದಾರಿ ಕಂಡುಕೊಳ್ಳಬಹುದು ಎಂಬುದಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರ ಈಗ ಸಾಕ್ಷಿಯಾಗಿದೆ. ಕೈದಿಗಳ ಮನಃಪರಿವರ್ತನೆ ಹಾಗೂ ಅವರ ಸ್ವಾವಲಂಬನೆ ಬದುಕಿಗಾಗಿ ಜೈಲಿನಲ್ಲಿ ‘ನವ ಸಂಕಲ್ಪ ಬೇಕರಿ’ ಘಟಕವನ್ನು ಆರಂಭಿಸಲಾಗಿದೆ.

ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮಹಾನಿರ್ದೇಶಕರಾದ (DGP) ಅಲೋಕ್ ಕುಮಾರ್ ಅವರು ಈ ಬೇಕರಿ ಘಟಕ ಹಾಗೂ ‘ನವ ಸಂಕಲ್ಪ ಬೇಕರಿ ಆನ್ ವೀಲ್ಸ್’ ಯೋಜನೆಗೆ ಚಾಲನೆ ನೀಡಿದರು. ಈ ವಿಶಿಷ್ಟ ಸುಧಾರಣಾ ಕ್ರಮಕ್ಕೆ ಎಚ್‌ಸಿಎಲ್ ಫೌಂಡೇಶನ್ ಕೈಜೋಡಿಸಿದೆ.

ಕೈದಿಗಳ ಕೈಯಲ್ಲೀಗ ಘಮಘಮಿಸೋ ಬೇಕರಿ ತಿನಿಸು

ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಆರಂಭವಾಗಿರುವ ಈ ಬೇಕರಿ ದೇಶದ ಜೈಲುಗಳಲ್ಲೇ ಅತ್ಯಂತ ಆಧುನಿಕ ಘಟಕಗಳಲ್ಲಿ ಒಂದಾಗಿದೆ. ಇಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ವೃತ್ತಿಪರ ಬೇಕರಿ ತರಬೇತಿ ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಳಿಸಿದ ಕೈದಿಗಳಿಗೆ ಅಧಿಕೃತ ಪ್ರಮಾಣಪತ್ರವನ್ನೂ ನೀಡಲಾಗುತ್ತದೆ. ಇದರಿಂದ ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ಗೌರವಾನ್ವಿತವಾಗಿ ಸ್ವಂತ ಉದ್ಯೋಗ ಮಾಡಿಕೊಂಡು ಹೊಸ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ.

ಸಾರ್ವಜನಿಕರಿಗೆ ಸಿಗಲಿದೆ ರುಚಿಕರ ಬೇಕರಿ ಪ್ರಾಡಕ್ಟ್ಸ್

ಜೈಲಿನ ಕೈದಿಗಳೇ ಸ್ವತಃ ಸಿದ್ಧಪಡಿಸಿದ ಬ್ರೆಡ್, ಬನ್, ಕೇಕ್ ಮತ್ತು ಬಿಸ್ಕೆಟ್‌ಗಳ ಗುಣಮಟ್ಟ ಹಾಗೂ ರುಚಿಯನ್ನು ಡಿಜಿಪಿ ಅಲೋಕ್ ಕುಮಾರ್ ಅವರು ಖುದ್ದಾಗಿ ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ತಿನಿಸುಗಳನ್ನು ತಯಾರಿಸುವಾಗ ಸ್ವಚ್ಛತೆ ಮತ್ತು ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡುವಂತೆ ಕೈದಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿ ಸಿದ್ಧವಾಗುವ ಉನ್ನತ ಗುಣಮಟ್ಟದ ಬೇಕರಿ ಉತ್ಪನ್ನಗಳನ್ನು ಸಾರ್ವಜನಿಕರಿಗೆ ತಲುಪಿಸಲು ‘ಮೊಬೈಲ್ ಬೇಕರಿ ವಾಹನ’ವನ್ನು ಬಳಸಲಾಗುತ್ತದೆ. ಬೆಂಗಳೂರಿನ ಪ್ರಮುಖ ನ್ಯಾಯಾಲಯಗಳ ಆವರಣ ಹಾಗೂ ಬಸ್ ನಿಲ್ದಾಣಗಳಲ್ಲಿ ಈ ಮೊಬೈಲ್ ಬೇಕರಿಗಳ ಮೂಲಕ ಕೈದಿಗಳು ತಯಾರಿಸಿದ ತಿನಿಸುಗಳನ್ನು ಮಾರಾಟ ಮಾಡಲಾಗುತ್ತದೆ. ಇದರಿಂದ ಸರ್ಕಾರಕ್ಕೆ ಆದಾಯ ಬರುವುದರ ಜತೆಗೆ ಕೈದಿಗಳ ಶ್ರಮಕ್ಕೂ ಬೆಲೆ ಸಿಗಲಿದೆ.

ಭರವಸೆಯ ಬದುಕು ನೀಡುವುದೇ ನಮ್ಮ ಗುರಿ

ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಡಿಜಿಪಿ ಅಲೋಕ್ ಕುಮಾರ್, “ಕೈದಿಗಳ ಬದುಕನ್ನು ಮರುರೂಪಿಸುವುದು ಮತ್ತು ಅವರ ಭವಿಷ್ಯಕ್ಕೆ ಹೊಸ ಭರವಸೆ ನೀಡುವುದು ಕಾರಾಗೃಹ ಸುಧಾರಣಾ ಆಡಳಿತದ ಮುಖ್ಯ ಗುರಿಯಾಗಬೇಕು. ಬೆಂಗಳೂರು ಜೈಲಿನಲ್ಲಿ ಹೊಸ ಬೇಕರಿ ಘಟಕ ಮತ್ತು ಬೇಕರಿ ಆನ್ ವೀಲ್ಸ್ ಚಾಲನೆ ಪಡೆದಿದೆ. ನಮಗೆ ಸಹಾಯ ಮಾಡಿದ HCL ಸಂಸ್ಥೆಗೆ ಧನ್ಯವಾದಗಳು. ನಾವು ಇನ್ನೂ ಸಾಗಬೇಕಾದ ಹಾದಿ ತುಂಬಾ ಇದೆ” ಎಂದು ತಿಳಿಸಿದರು.

ಬಳಿಕ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿನ ವಿಚಾರಣಾಧೀನ ಕೈದಿಗಳಿರುವ ವಿಭಾಗಗಳಿಗೆ ಭೇಟಿ ನೀಡಿ, ಜೈಲಿನ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಬೇಕರಿ ಉದ್ಘಾಟನೆಗೆ ಶ್ರಮಿಸಿದ ಬೆಂಗಳೂರು ಕೇಂದ್ರ ಕಾರಾಗೃಹದ ಇಡೀ ತಂಡದ ಪ್ರಯತ್ನವನ್ನು ಅವರು ಶ್ಲಾಘಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !