ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ರಣವೀರ್ ಸಿಂಗ್ ಮಹತ್ವದ ಸಮಾಜಮುಖಿ ಕಾರ್ಯವೊಂದನ್ನು ಮಾಡೋದಾಗಿ ಘೋಷಿಸಿದ್ದಾರೆ.
ಹೌದು! ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ‘ಸೇವಾ ಸಂಕಲ್ಪ ಅಭಿಯಾನ’ದಲ್ಲಿ ಭಾಗವಹಿಸಿದ ನಟ, 1,000 ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವು ನೀಡೋದಾಗಿ ಸಂಕಲ್ಪ ಮಾಡಿದ್ದಾರೆ. ಮುಂಬೈನ ಪ್ರಸಿದ್ಧ ಲಾಲ್‌ಬಾಗ್ಚಾ ರಾಜಾ ಗಣಪತಿ ದರುಶನ ಪಡೆದ ಬಳಿಕ ರಣವೀರ್ ಸಿಂಗ್ ಈ ಘೋಷಣೆ ಮಾಡಿದ್ದಾರೆ.
ಲಾಲ್‌ಬಾಗ್ಚಾ ರಾಜಾ ಪೆಂಡಾಲ್ ನಲ್ಲಿ ನಟ
ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಲಾಲ್‌ಬಾಗ್ಚಾ ರಾಜಾ ಪೆಂಡಾಲ್‌ಗೆ ಆಗಮಿಸಿದ ರಣವೀರ್ ಸಿಂಗ್, ಗಣೇಶನ ದರುಶನ ಪಡೆದು ಕುಟುಂಬದ ಪರವಾಗಿ ಆಶೀರ್ವಾದ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷ ತಮ್ಮ ಕುಟುಂಬಕ್ಕೆ ಸಂತೋಷದಿಂದ ಕೂಡಿತ್ತು. ಅದಕ್ಕಾಗಿ ಬಪ್ಪನಿಗೆ ಧನ್ಯವಾದ ಸಲ್ಲಿಸಲು ಹಾಗೂ ಮುಂದಿನ ಪಯಣಕ್ಕೆ ಆಶೀರ್ವಾದ ಪಡೆಯಲು ಬಂದಿರೋದಾಗಿ ಹೇಳಿದರು.
ಇದನ್ನೂ ಓದಿ:
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಾಗೂ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಕೈಜೋಡಿಸಿ, 1,000 ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡುವುದಾಗಿ ರಣವೀರ್ ಘೋಷಿಸಿದರು. ಈ ಕಾರ್ಯ ಬಪ್ಪನಿಗೆ ಸಂತಸ ನೀಡಲಿ ಮತ್ತು ತಮ್ಮ ಹಾಗೂ ಕುಟುಂಬದ ಮೇಲೆ ಅವರ ಆಶೀರ್ವಾದ ಸದಾ ಇರಲಿ ಎಂದು ಆಶಿಸಿದರು.
ಬಿಳಿ ಕುರ್ತಾ–ಪೈಜಾಮಾದಲ್ಲಿ ಮಿಂಚಿದ ರಣವೀರ್
ಬಿಳಿ ಕುರ್ತಾ–ಪೈಜಾಮಾ ಧರಿಸಿ ಪೆಂಡಾಲ್‌ಗೆ ಆಗಮಿಸಿದ ರಣವೀರ್‌ಗೆ ಅಭಿಮಾನಿಗಳಿಂದಲೂ ಭರ್ಜರಿ ಸ್ವಾಗತ ದೊರೆಯಿತು. ಭದ್ರತೆಯ ನಡುವೆಯೂ ಅಭಿಮಾನಿಗಳತ್ತ ಕೈಬೀಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರತಿವರ್ಷದಂತೆ ಈ ಬಾರಿಯೂ ಕುಟುಂಬದ ಒಳಿತಿಗಾಗಿ ಗಣೇಶನ ದರುಶನ ಪಡೆದಿರುವುದಾಗಿ ಅವರು ತಿಳಿಸಿದರು.
ಸೇವಾ ಸಂಕಲ್ಪದಲ್ಲಿ ಕೈ ಜೋಡಿಸಿದ ಚಿತ್ರರಂಗ
ರಣವೀರ್ ಸಿಂಗ್ ಮಾತ್ರವಲ್ಲದೆ ಚಿತ್ರರಂಗದ ಇತರ ಗಣ್ಯರೂ ಈ ಅಭಿಯಾನದಲ್ಲಿ ವಿವಿಧ ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸುತ್ತಿದ್ದಾರೆ. ನಟಿ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ ದೇಶದ 20 ಶಾಲೆಗಳ ನವೀಕರಣಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿರುವುದಾಗಿ ವರದಿಯಾಗಿದೆ.



