September 18, 2026
Friday, September 18, 2026
spot_img

CINE | ಸಂಸ್ಕೃತಿ, ಪ್ರೀತಿ, ಕೊಲೆ, ಥ್ರಿಲ್ಲರ್… ಆಸ್ಕರ್‌ಗೆ ಹಾರಿದ ‘ಗೋಂಧಲ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸಿನಿಮಾಗಳ ಕಥೆಗಳು ಇತ್ತೀಚಿನ ವರ್ಷಗಳಲ್ಲಿ ದೇಶದ ಗಡಿಗಳನ್ನು ದಾಟಿ ಜಾಗತಿಕ ಪ್ರೇಕ್ಷಕರ ಗಮನ ಸೆಳೆಯುತ್ತಿರೋದಂತೂ ನಿಜ. ಅದರಲ್ಲೂ ಪ್ರಾದೇಶಿಕ ಭಾಷೆಯ ಸಿನಿಮಾಗಳು ತಮ್ಮ ವಿಭಿನ್ನ ಕಥಾವಸ್ತು, ಸ್ಥಳೀಯ ಸಂಸ್ಕೃತಿ ಮತ್ತು ಹೊಸ ನಿರೂಪಣಾ ಶೈಲಿಯ ಮೂಲಕ ವಿಶ್ವದ ಪ್ರತಿಷ್ಠಿತ ವೇದಿಕೆಗಳಲ್ಲಿ ಗುರುತಿಸಿಕೊಳ್ಳುತ್ತಿವೆ.

‘ಆರ್‌ಆರ್‌ಆರ್’ ಆಸ್ಕರ್ ಗೆದ್ದು ಇತಿಹಾಸ ನಿರ್ಮಿಸಿದ ಬಳಿಕ ಇದೀಗ ಮತ್ತೊಂದು ಭಾರತೀಯ ಸಿನಿಮಾ ವಿಶ್ವದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಯ ಅಂಗಳ ಪ್ರವೇಶಿಸಿದೆ. ಈ ಬಾರಿ ಭಾರತದ ಪರವಾಗಿ ಆಸ್ಕರ್ ರೇಸ್‌ಗೆ ಆಯ್ಕೆಯಾಗಿರುವುದು ಮರಾಠಿ ಸಿನಿಮಾ ‘ಗೋಂಧಲ್’.

99ನೇ ಆಸ್ಕರ್ ಗೆ ‘ಗೋಂಧಲ್’

99ನೇ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ‘ಗೋಂಧಲ್’ ಸಿನಿಮಾವನ್ನು ಭಾರತೀಯ ಸಿನಿಮಾ ಫೆಡರೇಷನ್ ಅಧಿಕೃತವಾಗಿ ಆಯ್ಕೆ ಮಾಡಿದೆ. ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದಲ್ಲಿ ಸ್ಪರ್ಧಿಸಲಿರುವ ಈ ಸಿನಿಮಾ ಮಹಾರಾಷ್ಟ್ರದ ಸಾಂಪ್ರದಾಯಿಕ ‘ಗೋಂಧಲ್’ ಆಚರಣೆಯನ್ನು ಕಥೆಯ ಪ್ರಮುಖ ಹಿನ್ನೆಲೆಯಾಗಿ ಬಳಸಿಕೊಂಡಿದೆ. ಸ್ಥಳೀಯ ಸಂಸ್ಕೃತಿಯ ಜತೆಗೆ ಪ್ರೀತಿ, ಸಂಬಂಧ, ಅಪರಾಧ ಮತ್ತು ಮಾನವ ಸ್ವಭಾವದ ಸಂಕೀರ್ಣ ಮುಖಗಳನ್ನು ಸಿನಿಮಾ ತೆರೆದಿಡುತ್ತದೆ.

ಇದನ್ನೂ ಓದಿ:

‘ಗೋಂಧಲ್’ ಸಿನಿಮಾಕ್ಕೆ ಮಣೆ ಹಾಕಿದ ಜ್ಯೂರಿ

ಆಸ್ಕರ್ ಆಯ್ಕೆ ಪ್ರಕ್ರಿಯೆಯಲ್ಲಿ ‘ಗೋಂಧಲ್’ ಮಾತ್ರವಲ್ಲದೆ ‘ಧುರಂಧರ್’, ನಾಗಾ ಸಿನಿಮಾ ‘ಅಂಗ’ ಹಾಗೂ ತಮಿಳಿನ ‘ಡೊರೊತಿ’ ಸೇರಿದಂತೆ ಹಲವು ಚಿತ್ರಗಳು ಪರಿಗಣನೆಯಲ್ಲಿದ್ದವು. ‘ಧುರಂಧರ್’ ಸಿನಿಮಾವನ್ನು ಆಯ್ಕೆ ಮಾಡಬೇಕೆಂಬ ಚರ್ಚೆಯೂ ನಡೆದಿತ್ತು ಎನ್ನಲಾಗಿದೆ. ಆದರೆ ಅಂತಿಮವಾಗಿ ‘ಗೋಂಧಲ್’ ಸಿನಿಮಾಕ್ಕೆ ಜ್ಯೂರಿ ಮಣೆ ಹಾಕಿದೆ. ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳ ಚಿತ್ರಣದ ಜತೆಗೆ ಕಥೆಯಲ್ಲಿನ ಮಾನವೀಯ ಸಂಘರ್ಷ ಹಾಗೂ ಪಾತ್ರಗಳ ಮನೋಭಾವದ ಅನಾವರಣ ಸಿನಿಮಾದ ಆಯ್ಕೆಯಲ್ಲಿ ಗಮನ ಸೆಳೆದ ಅಂಶಗಳಾಗಿವೆ.

ಏನಿದು ‘ಗೋಂಧಲ್’ ಕಥೆ?

‘ಗೋಂಧಲ್’ ಮಹಾರಾಷ್ಟ್ರದಲ್ಲಿ ರಾತ್ರಿ ಪೂರ್ತಿ ನಡೆಯುವ ಸಾಂಪ್ರದಾಯಿಕ ಪೂಜಾ ಆಚರಣೆ. ಇದೇ ಆಚರಣೆಯ ಹಿನ್ನೆಲೆಯ ಮೇಲೆ ಸಿನಿಮಾದ ಕಥೆ ಸಾಗುತ್ತದೆ. ಹಳ್ಳಿಯೊಂದಕ್ಕೆ ಸೊಸೆಯಾಗಿ ಬರುವ ಸುಮನ್, ಪತಿ ಆನಂದ್ ಜೊತೆ ಸಾಮಾನ್ಯ ಜೀವನ ನಡೆಸುತ್ತಿರುತ್ತಾಳೆ. ಆದರೆ ಗೋಂಧಲ್ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗೋಂಧಾಲಿ ಸಾಹೇಬನತ್ತ ಸುಮನ್‌ಗೆ ಪ್ರೀತಿ ಮೂಡುತ್ತದೆ. ಪತಿಯಿಂದ ದೂರವಾಗಲು ಆಕೆ ಕೈಗೊಳ್ಳುವ ಪ್ರಯತ್ನಗಳು ಮುಂದೆ ಅನಿರೀಕ್ಷಿತ ತಿರುವು ಪಡೆಯುತ್ತವೆ.

ಸುಮನ್‌ನ ಈ ಪ್ರಯತ್ನಗಳ ನಡುವೆ ಒಂದು ಕೊಲೆ ನಡೆಯುತ್ತದೆ. ಬಳಿಕ ಪ್ರಕರಣದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ನಡೆಸುವ ಹೋರಾಟ ಕಥೆಗೆ ಥ್ರಿಲ್ಲರ್ ಸ್ಪರ್ಶ ನೀಡುತ್ತದೆ. ಹೀಗಾಗಿ ಕೇವಲ ಒಂದು ಆಚರಣೆಯ ಕಥೆಯಾಗದೆ, ಪ್ರೀತಿ, ಸಂಬಂಧ, ಅಪರಾಧ ಮತ್ತು ಮನುಷ್ಯನ ಒಳಮನಸ್ಸಿನ ಹಲವು ಪದರಗಳನ್ನು ‘ಗೋಂಧಲ್’ ತೆರೆದಿಡುತ್ತದೆ.

ಸಂತೋಷ್ ದಾವ್ಕರ್ ನಿರ್ದೇಶಿಸಿರುವ ಈ ಸಿನಿಮಾ ಇದೀಗ ಆಸ್ಕರ್ ಅಂಗಳದಲ್ಲಿ ಭಾರತದ ಪ್ರತಿನಿಧಿಯಾಗಿ ಗಮನ ಸೆಳೆಯುತ್ತಿದೆ. ಪ್ರಾದೇಶಿಕ ಮಣ್ಣಿನ ಕಥೆಯೊಂದು ಜಾಗತಿಕ ಸಿನಿಮಾ ವೇದಿಕೆಯಲ್ಲಿ ತನ್ನ ಛಾಪು ಮೂಡಿಸಲು ಹೊರಟಿರುವುದು ಮರಾಠಿ ಚಿತ್ರರಂಗದ ಜೊತೆಗೆ ಭಾರತೀಯ ಪ್ರಾದೇಶಿಕ ಸಿನಿಮಾಗಳಿಗೂ ಮತ್ತೊಂದು ಮಹತ್ವದ ಕ್ಷಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !