ಹೊಸದಿಗಂತ ವರದಿ ದಾವಣಗೆರೆ:
ಕುಡಿದ ಅಮಲಿನಲ್ಲಿದ್ದ ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ಹೆತ್ತ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಆರನೇ ಮೈಲಿಕಲ್ಲು ಗ್ರಾಮದಲ್ಲಿ ಶುಕ್ರವಾರ ವರದಿಯಾಗಿದೆ.
ಗ್ರಾಮದ ಪ್ರೇಮಾ(60 ವರ್ಷ) ತನ್ನ ಮಗ ಆನಂದ ಎಂಬಾತನಿಂದಲೇ ಹತ್ಯೆಯಾದ ದುರ್ದೈವಿ ತಾಯಿ.
15 ವರ್ಷಗಳ ಹಿಂದೆ ಪ್ರೇಮಾ ಪತಿ ಮೃತಪಟ್ಟಿದ್ದು, ಆಗಿನಿಂದಲೂ ಹೊಲದಲ್ಲಿ ಕೂಲಿ ಕೆಲಸ, ಪಾತ್ರೆ ತೊಳೆಯುವುದೂ ಸೇರಿದಂತೆ ಮನೆಗೆಲಸ ಮಾಡಿಕೊಂಡು, ತಾನು ಉಪವಾಸವಿದ್ದರೂ ತನ್ನ ಎರಡು ಹೆಣ್ಣು ಮಕ್ಕಳು, ಓರ್ವ ಮಗನಿಗೆ ಒಂದಿಷ್ಟೂ ಕೊರತೆಯಾಗದಂತೆ ಸಾಕಿದ್ದರು. ಕಳೆದ 3 ವರ್ಷಗಳ ಹಿಂದೆ ಓರ್ವ ಹೆಣ್ಣು ಮಗಳು ಸಾವನ್ನಪ್ಪಿದ್ದು, ಮತ್ತೊಬ್ಬ ಮಗಳನ್ನು ಆರನೇ ಮೈಲಿಕಲ್ಲು ಗ್ರಾಮದಲ್ಲೇ ಮದುವೆ ಮಾಡಿಕೊಟ್ಟಿದ್ದರು.
ಇದನ್ನೂ ಓದಿ:
ಮಗ ಆನಂದ ದುಡಿಮೆಯನ್ನೂ ಮಾಡದೇ, ಕುಡಿತದ ಚಟಕ್ಕೆ ದಾಸನಾಗಿದ್ದನು. ಕೆಲಸಕ್ಕೆಂದು ಊರೂರು ಸುತ್ತುತ್ತಿದ್ದ. ತಾಯಿ ಜೊತೆಗೆ ಚೆನ್ನಾಗಿರದೇ, ಕುಡಿದ ನಶೆಯಲ್ಲಿ ಜಗಳ ಮಾಡುತ್ತಾ, ಆಕೆ ದುಡಿದು ತಂದ ಹಣ ಕಿತ್ತುಕೊಂಡು ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ.
ಗಣೇಶನ ಹಬ್ಬಕ್ಕೆಂದು ಊರಿಗೆ ಬಂದಿದ್ದ ಆನಂದ, ಗುರುವಾರ ರಾತ್ರಿಯೂ ಕುಡಿದ ಮತ್ತಿನಲ್ಲಿ ತಾಯಿ ಜೊತೆಗೆ ಜಗಳವಾಡಿ ಹಲ್ಲೆ ಮಾಡಿದ್ದಾನೆ. ಆತನ ಹೊಡೆತಕ್ಕೆ ಬಡಪಾಯಿ ತಾಯಿ ಪ್ರೇಮ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆರೋಪಿ ಆನಂದನ್ನು ಬಂಧಿಸಿದ್ದಾರೆ. ಈ ಬಗ್ಗೆ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



