ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಮೀನುಗಾರಿಕಾ ದಕ್ಕೆಗೆ ಇಂದು ಬೆಳಗ್ಗೆ ದಿಢೀರ್ ಭೇಟಿ ನೀಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಲ್ಲರಲ್ಲಿ ಅಚ್ಚರಿ ಮೂಡಿಸಿದರು.
ಈ ಸಂದರ್ಭ ಮೀನುಗಾರರ ಜೊತೆ ಚರ್ಚೆ ನಡೆಸಿದ ಅವರು ಮೀನುಗಾರ ಕಾರ್ಮಿಕರು, ಮೀನುಗಾರಿಕಾ ಮಹಿಳೆಯರ ಸಮಸ್ಯೆ ಆಲಿಸಿದರು.
ಈ ಸಂದರ್ಭ ಹಳೆ ಬಂದರಿನಲ್ಲಿ ಶೌಚಾಲಯದಂತಹ ಮೂಲ ಸೌಕರ್ಯದ ಕೊರತೆ ಇರುವ ಬಗ್ಗೆ ಮಹಿಳೆಯರು ತಮ್ಮ ನೋವು ತೋಡಿಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನನ್ನ ಭೇಟಿಯ ಕಾರಣಕ್ಕೆ ಏಕಾಏಕಿ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಇದರ ಬಗ್ಗೆ ನನಗೆ ಸಮಾಧಾನ ಇಲ್ಲ. ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಸ್ಥಳೀಯ, ಹೊರ ರಾಜ್ಯಗಳ ಕಾರ್ಮಿಕರು ಬಹುಸಂಖ್ಯೆಯಲ್ಲಿ ಇಲ್ಲಿ ಇದ್ದಾರೆ. ಅವರಿಗೆ ಇದೇ ಬದುಕಾಗಿದ್ದು, ಅವರ ದೈನಂದಿನ ಚಟುವಟಿಕೆಗೆ ಅಡ್ಡಿ ಆಗಬಾರದು. ಇದರ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಗೆ ತಿಳಿಸಿದ್ದೇನೆ. ಅಧಿಕಾರಿಗಳಿಂದಲೇ ಇಂತಹ ಆದೇಶ ಆಗಿದ್ದರೆ ಅಂತಹ ಅಧಿಕಾರಿಯನ್ನು ಅಮಾನತು ಮಾಡಲಾಗುವುದು ಎಂದರು.
ಮೀನುಗಾರ ಸಂಘಟನೆ ಪ್ರಮುಖರು ಭೇಟಿ ಮಾಡಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅಳಿವೆ ಬಾಗಿಲಿನಲ್ಲಿ ಡ್ರೆಜ್ಜಿಂಗ್ ಮಾಡುವ ಸಂಬಂಧ ತಾಂತ್ರಿಕ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹಳೆ ಬಂದರು ಪ್ರದೇಶದಲ್ಲಿ ಪ್ರತ್ಯೇಕ ಆಸ್ಪತ್ರೆ, ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಾಗುವುದು. ಇಲ್ಲಿ ಮಾಫಿಯಾ ಇರುವ ಬಗ್ಗೆಯೂ ಮೀನುಗಾರರು ದೂರಿದ್ದಾರೆ. ಇವುಗಳಿಗೆ ನಾವು ಅವಕಾಶ ಕೊಡುವುದಿಲ್ಲ. ಎಷ್ಟೇ ಪ್ರಭಾವಿ ಇದ್ದರೂ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್ ಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.



