September 19, 2026
Saturday, September 19, 2026
spot_img

ಹುಬ್ಬಳ್ಳಿಯ ಹೈಟೆಕ್ ಕೆಎಲ್‌ಇ ಆಸ್ಪತ್ರೆಗೆ ಚಾಲನೆ ನೀಡಿದ ಪ್ರಹ್ಲಾದ್ ಜೋಶಿ!

ಹೊಸದಿಗಂತ ವರದಿ ಹುಬ್ಬಳ್ಳಿ:

ಗಬ್ಬೂರು ಕ್ರಾಸ್ ಬಳಿ ಹೊಸದಾಗಿ ತಲೆಎತ್ತಿರೋ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (ಕಾಹೇರ್) ಜೆಜಿಎಂಎಂ ವೈದ್ಯಕೀಯ ಕಾಲೇಜು ಕಟ್ಟಡ, ಕೆಎಲ್‌ಇ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ ನೆರವೇರಿದೆ.

ನಿಗದಿಯಂತೆ ಈ ಬೃಹತ್ ಆಸ್ಪತ್ರೆ ಮತ್ತು ಕಾಲೇಜು ಕಟ್ಟಡವನ್ನು ಉದ್ಘಾಟಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಬೇಕಿತ್ತು. ಆದರೆ, ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ವೈದ್ಯರ ಸಲಹೆಯಂತೆ ಅವರು ಕಾರ್ಯಕ್ರಮದಿಂದ ದೂರ ಉಳಿಯಬೇಕಾಯ್ತು. ಹೀಗಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆಸ್ಪತ್ರೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಅಮಿತ್ ಶಾ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಹುಬ್ಬಳ್ಳಿಯಿಂದ ನೇರವಾಗಿ ಗುಜರಾತ್‌ಗೆ ಮರಳಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಕುಲಾಧಿಪತಿ ಪ್ರಭಾಕರ ಕೋರೆ ಸ್ಪಷ್ಟಪಡಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು. ಹುಬ್ಬಳ್ಳಿಯಲ್ಲಿ ಕೆಎಲ್‌ಇ ಸಂಸ್ಥೆಯ ಅತ್ಯಾಧುನಿಕ ಆಸ್ಪತ್ರೆ ಬರಬೇಕು ಎನ್ನುವುದು ಮೂರುಸಾವಿರ ಮಠದ ಶ್ರೀಗಳ ಬಹುದೊಡ್ಡ ಆಸೆಯಾಗಿತ್ತು. ನಾಲ್ಕು ವರ್ಷಗಳ ಹಿಂದೆ ಶುರುವಾದ ಈ ಕನಸಿನ ಯೋಜನೆಗೆ ಕೊನೆಗೂ ಚಾಲನೆ ಸಿಕ್ಕಿದ್ದು, ಸ್ವಾಮೀಜಿಯವರ ಮಹತ್ವದ ಆಸೆ ಇಂದು ಈಡೇರಿದಂತಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ರಾಜ್ಯಸಭಾ ಸದಸ್ಯ ಎಂ. ನಾಗರಾಜ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಹಾಗೂ ಪ್ರಸಾದ್ ಅಬ್ಬಯ್ಯ ಭಾಗವಹಿಸಿ ಶುಭ ಹಾರೈಸಿದರು. ಇವರ ಜೊತೆಗೆ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ಅಮಿತ್ ಕೋರೆ, ಶಂಕರಣ್ಣ ಮುನವಳ್ಳಿ, ಮಹಾಂತೇಶ ಕವಟಗಿಮಠ ಹಾಗೂ ಅಶೋಕ ಶೆಟ್ಟರ್ ಸಾಥ್ ನೀಡಿದರು.

ಇನ್ನು ಈ ವೈದ್ಯಕೀಯ ಸಂಸ್ಥೆಯು ಬರೋಬ್ಬರಿ 50 ಎಕರೆ ವಿಸ್ತಾರವಾದ ಜಾಗದಲ್ಲಿ ನಿರ್ಮಾಣವಾಗಿದ್ದು, ಬಡವರು ಮತ್ತು ಸಾಮಾನ್ಯ ಜನರಿಗೆ ಉತ್ತಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ 700 ಕೋಟಿ ರೂಪಾಯಿ ಬೃಹತ್ ವೆಚ್ಚದಲ್ಲಿ ಅತ್ಯಾಧುನಿಕ ಆಸ್ಪತ್ರೆ ಹಾಗೂ ಕಾಲೇಜು ಆವರಣವನ್ನು ಅಭಿವೃದ್ಧಿಪಡಿಸಲಾಗಿದೆ. ಹುಬ್ಬಳ್ಳಿಯ ಭಾಗದ ಜನರಿಗೆ ಇನ್ಮುಂದೆ ಹೆಲ್ತ್ ಕೇರ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಸಿಗೋದಂತೂ ಪಕ್ಕಾ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !