ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ, ಅಭ್ಯರ್ಥಿಗಳಿಂದ ಕೋಟ್ಯಂತರ ರೂ. ಲೂಟಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಪ್ರಮುಖ ಆರೋಪಿಯಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಅವರಿಗೆ ಸಾಥ್ ನೀಡಿದ್ದ ಮಧ್ಯವರ್ತಿ ಬಸವರಾಜು ಕನ್ನಾಳೆ ಅವರನ್ನು ಬಂಧಿಸಿದ್ದಾರೆ.
ವಿಚಾರಣೆಗೆ ಅಸಹಕಾರ – ತಡರಾತ್ರಿ ಕೋರ್ಟ್ಗೆ ಹಾಜರು
ಕಳೆದ ನಾಲ್ಕು ದಿನಗಳಿಂದ ಜೈಲಿನಲ್ಲೇ ಇಬ್ಬರು ಆರೋಪಿಗಳನ್ನು ಇಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಆರೋಪಿಗಳು ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿ, ಪ್ರಶ್ನೆಗಳಿಗೆ ಸರಿಯಾಗಿ ಸಹಕರಿಸದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಇಬ್ಬರನ್ನೂ ಬಂಧಿಸಲಾಗಿದೆ. ತಡರಾತ್ರಿ ಇಡಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಇಬ್ಬರನ್ನೂ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಅಧಿಕಾರಿಗಳು ಇಬ್ಬರನ್ನೂ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ಇಂದಿನಿಂದ ಇಡಿ ಕಚೇರಿಯಲ್ಲಿ ಇವರ ತನಿಖೆ ಮುಂದುವರಿಯಲಿದೆ.
ಲಂಚದ ಹಣದಲ್ಲಿ ಐಷಾರಾಮಿ ಲೈಫ್ ಸ್ಟೈಲ್
ಅಭ್ಯರ್ಥಿಗಳ ಭವಿಷ್ಯದ ಜತೆ ಆಟವಾಡಿ ಜ್ಞಾನೇಂದ್ರ ಕುಮಾರ್ ಸಂಪಾದಿಸಿದ್ದ ಲಂಚದ ಹಣದ ಹರಿವು ಎಲ್ಲಿಗೆ ಹೋಗಿದೆ ಎಂಬುದನ್ನು ಸಿಐಡಿ ಮೂಲಗಳು ಪತ್ತೆಹಚ್ಚಿವೆ. ಅಕ್ರಮವಾಗಿ ಗಳಿಸಿದ ಹಣದಲ್ಲಿ ಜ್ಞಾನೇಂದ್ರ ಅವರು ತಮ್ಮ ಗೆಳತಿಗೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕೊಡಿಸಿದ್ದರು. ಅಷ್ಟೇ ಅಲ್ಲದೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ತಮ್ಮ ಸಹೋದರನ ಹೆಸರಿನಲ್ಲಿ ಐಷಾರಾಮಿ ವಿಲ್ಲಾವನ್ನು ಖರೀದಿಸಿರುವುದು ತನಿಖೆಯಲ್ಲಿ ಬಯಲಾಗಿದೆ.
ಶಾಂತ ಹೊಸಮನಿಗೆ ಸಿಐಡಿ ಉರುಳು
ಇತ್ತ ಇದೇ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ವ್ಯಕ್ತಿ ಶಾಂತ ಹೊಸಮನಿ ಅವರ ಸುತ್ತಲೂ ಸಿಐಡಿ ತನಿಖೆಯ ಉರುಳು ಬಿಗಿಯಾಗಿದೆ. ಸಿಐಡಿ ವಿಚಾರಣೆಗೆ ಶಾಂತ ಹೊಸಮನಿ ಹಾಜರಾದ ಬೆನ್ನಲ್ಲೇ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಹಿಂದೆ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು, ಇದೀಗ ದಾವಣಗೆರೆಯಲ್ಲಿರುವ ಅವರ ಮನೆ ಮೇಲೂ ಜಂಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:
ದಾವಣಗೆರೆಯ ಮನೆಯನ್ನು ಬಾಡಿಗೆಗೆ ನೀಡಿ ಶಾಂತ ಹೊಸಮನಿ ಬೆಂಗಳೂರಿಗೆ ವಾಸ್ತವ್ಯ ಬದಲಿಸಿದ್ದರು. ಸದ್ಯ ಬಾಡಿಗೆದಾರರು ಖಾಲಿ ಮಾಡಿದ್ದ ಆ ಮನೆಯನ್ನು ಸಿಐಡಿ ಅಧಿಕಾರಿಗಳು ಜಾಲಾಡಿದ್ದಾರೆ. ಬೆಂಗಳೂರಿನ ಮನೆಯಲ್ಲಿ ಜಪ್ತಿ ಮಾಡಲಾಗಿರುವ ಎರಡು ಮೊಬೈಲ್ ಫೋನ್ಗಳು ಹಾಗೂ ಒಂದು ಟ್ಯಾಬ್ಲೆಟ್ ಅನ್ನು ತಾಂತ್ರಿಕ ವಿಶ್ಲೇಷಣೆಗಾಗಿ ಕಳುಹಿಸಲಾಗಿದ್ದು, ಡಿಜಿಟಲ್ ಪುರಾವೆಗಳು ಲಭ್ಯವಾದರೆ ಹಗರಣದ ಹಿಂದಿರುವ ಇನ್ನೂ ಹಲವರ ಮುಖವಾಡ ಕಳಚುವ ಸಾಧ್ಯತೆಯಿದೆ.



