ಹೊಸದಿಗಂತ ಡಿಜಿಟಲ್ ಡೆಸ್ಕ್:
ಶತಶತಮಾನಗಳಿಂದಲೂ ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಭಾರತವು ಇಡೀ ಜಗತ್ತಿಗೆ ಮಾರ್ಗದರ್ಶನ ನೀಡುತ್ತಾ ಬಂದಿದೆ. ಅದೇ ಸದ್ಧಾಂತಿಕ ಬದ್ಧತೆ ಹಾಗೂ ನಮ್ಮ ಸಾಂಸ್ಕೃತಿಕ ಅನುಭವಗಳ ಅಡಿಪಾಯದ ಮೇಲೆ, ಇಂದು ಆಧುನಿಕ ಹವಾಮಾನ ಸವಾಲುಗಳಿಗೂ ಭಾರತವೇ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಪರಿಹಾರಗಳನ್ನು ಒದಗಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (NGT) ದೆಹಲಿಯಲ್ಲಿ ಸೆ.19 ಮತ್ತು 20 ರಂದು ಆಯೋಜಿಸಿರುವ ‘ದಿ ಫ್ಯೂಚರ್ ಆಫ್ ಎನ್ವಿರಾನ್‌ಮೆಂಟ್ ಅಂಡ್ ಕ್ಲೈಮೇಟ್ ಡೈನಾಮಿಕ್ಸ್’ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ ಪ್ರಧಾನಿಯವರು ಪರಿಸರ ದೂರು ಹಾಗೂ ಮಾಹಿತಿ ಹಂಚಿಕೆಗೆ ನೆರವಾಗುವ ‘NGT ಮೊಬೈಲ್ ಆಪ್’ ಅನ್ನು ಲೋಕಾರ್ಪಣೆಗೊಳಿಸಿದರು.
ಅಭಿವೃದ್ಧಿಶೀಲ ರಾಷ್ಟ್ರಗಳನ್ನೇ ಗುರಿ ಮಾಡಲಾಗುತ್ತಿದೆ
ಜಾಗತಿಕವಾಗಿ ಇಂಗಾಲದ ಹೊರಸೂಸುವಿಕೆಗೆ ಅಭಿವೃದ್ಧಿಶೀಲ ರಾಷ್ಟ್ರಗಳನ್ನೇ ಗುರಿ ಮಾಡಲಾಗುತ್ತಿರುವ ಈ ನೀತಿಯನ್ನು ಪ್ರಧಾನಿ ತೀವ್ರವಾಗಿ ಖಂಡಿಸಿದರು. ಅನೇಕ ಬಾರಿ ಇಂಗಾಲದ ಹೊರಸೂಸುವಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಹೇರಲಾಗುತ್ತಿದೆ. ಆದರೆ ಸತ್ಯ ಏನೆಂದರೆ, ಇಂದಿಗೂ ಭಾರತದಲ್ಲಿ ಇಂಗಾಲದ ಹೊರಸೂಸುವಿಕೆಯು ಜಾಗತಿಕ ಸರಾಸರಿಯ ಅರ್ಧಕ್ಕಿಂತಲೂ ಕಡಿಮೆಯಿದೆ ಎಂದು ಸಮಾವೇಶದಲ್ಲಿದ್ದ ಗ್ಲೋಬಲ್ ಸೌತ್ ನಾಯಕರ ಸಮ್ಮುಖದಲ್ಲಿ ಪ್ರಧಾನಿ ಮೋದಿ ತಿಳಿಸಿದರು.
ಅಲ್ಲದೆ, ಮುಂದುವರಿದ ಶ್ರೀಮಂತ ದೇಶಗಳಲ್ಲಿನ ಇಂಗಾಲದ ಹೊರಸೂಸುವಿಕೆಯು ಭಾರತಕ್ಕಿಂತ ಬರೋಬ್ಬರಿ ಆರು ಪಟ್ಟು ಹೆಚ್ಚಾಗಿದೆ ಎಂಬ ನೈಜ ಅಂಕಿ-ಅಂಶಗಳನ್ನು ಭಾರತವು ಜಾಗತಿಕ ವೇದಿಕೆಗಳಲ್ಲಿ ಸದಾ ಧ್ವನಿ ಎತ್ತಿ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು.
ಪ್ಯಾರಿಸ್ ಒಪ್ಪಂದದ ಗುರಿ ತಲುಪಿದ ಏಕೈಕ ಜಿ-20 ದೇಶ ಭಾರತ
ಕಳೆದ 12 ವರ್ಷಗಳಲ್ಲಿ ಪರಿಸರ ಸಂರಕ್ಷಣೆಯ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವು ಅಸಾಧಾರಣ ಪ್ರಗತಿಯನ್ನು ಸಾಧಿಸಿದೆ ಎಂದು ಪಿಎಂ ಮೋದಿ ಹೆಮ್ಮೆಯಿಂದ ನುಡಿದರು. “ನಾವು ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಪ್ಯಾರಿಸ್ ಹವಾಮಾನ ಶೃಂಗಸಭೆಯಲ್ಲಿ ನೀಡಿದ್ದ ಭರವಸೆಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಈಡೇರಿಸಿದ ಏಕೈಕ ಜಿ-20 ರಾಷ್ಟ್ರ ಭಾರತವಾಗಿದೆ. ಇದು ಹೊಸ ಭಾರತದ ಶಕ್ತಿ ಎಂದ ಅವರು, ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ಮತ್ತು ಸೌರಶಕ್ತಿಯ ಬಳಕೆಯಲ್ಲಿ ಭಾರತದ ಸಾಧನೆಯನ್ನು ಇಂದು ಜಗತ್ತೇ ಶ್ಲಾಘಿಸುತ್ತಿದೆ ಎಂದರು.
ಇದನ್ನೂ ಓದಿ:
ಗಣ್ಯರ ಉಪಸ್ಥಿತಿ
ಪರಿಸರ ಬಿಕ್ಕಟ್ಟುಗಳು ಮತ್ತು ಕಾನೂನು ಚೌಕಟ್ಟುಗಳ ಕುರಿತು ನ್ಯಾಯಾಂಗ ಹಾಗೂ ಸರ್ಕಾರಿ ವಲಯದ ಪ್ರಮುಖರನ್ನು ಒಂದುಗೂಡಿಸಿರುವ ಈ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಸೂರ್ಯಕಾಂತ್, ಕೇಂದ್ರ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಹಾಗೂ ಎನ್‌ಜಿಟಿ ಅಧ್ಯಕ್ಷ ಜಸ್ಟಿಸ್ ಪ್ರಕಾಶ್ ಶ್ರೀವಾಸ್ತವ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



