September 19, 2026
Saturday, September 19, 2026
spot_img

ಸರ್ಕಾರಿ ಶಾಲಾ ಮಕ್ಕಳಿಗೆ ಚಿಕನ್ ಬಿರಿಯಾನಿ ಭಾಗ್ಯ?: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹೊಸ ಪ್ಲ್ಯಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜೈಲಿನ ಕೈದಿಗಳಿಗೂ ಸಹ ಚಿಕನ್ ಬಿರಿಯಾನಿ ನೀಡಲಾಗುತ್ತದೆ. ಹಾಗಿರುವಾಗ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅದನ್ನು ನೀಡಲು ಸಾಧ್ಯವಿಲ್ಲವೇ? ಎಂದು ತಮಿಳುನಾಡಿನ ಶಾಲಾ ಶಿಕ್ಷಣ ಸಚಿವ ರಾಜ್ ಮೋಹನ್ ಪ್ರಶ್ನಿಸಿದ್ದಾರೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯಡಿ ಚಿಕನ್ ಬಿರಿಯಾನಿ ನೀಡಿವುದು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ದೊಡ್ಡ ಆಸೆಯಾಗಿದ್ದು, ಇದನ್ನು ಜಾರಿಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.

ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಮೊದಲ ಆದ್ಯತೆ

ಈ ಯೋಜನೆಯನ್ನು ತಕ್ಷಣವೇ ಇಡೀ ರಾಜ್ಯಾದ್ಯಂತ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವರು, ದೊಡ್ಡ ಪ್ರಮಾಣದಲ್ಲಿ ಆಹಾರ ತಯಾರಿಸುವಾಗ ಸ್ವಚ್ಛತೆ ಮತ್ತು ಆಹಾರ ಸುರಕ್ಷತೆ ಬಹಳ ಮುಖ್ಯ ಎಂದಿದ್ದಾರೆ. ಮಕ್ಕಳಿಗೆ ಅತ್ಯಂತ ಆರೋಗ್ಯಕರ ಹಾಗೂ ನೈರ್ಮಲ್ಯಯುತ ವಾತಾವರಣದಲ್ಲಿ ಬಿರಿಯಾನಿ ಸಿದ್ಧಪಡಿಸಿ ಬಡಿಸಬೇಕಿದೆ. ಇದಕ್ಕಾಗಿ ಮೊದಲ ಹಂತದಲ್ಲಿ ಪ್ರಾಯೋಗಿಕ ಯೋಜನೆ ನಡೆಸಿ ಪರಿಶೀಲಿಸಲಾಗುವುದು. ಮುಂಬರುವ ದಿನಗಳಲ್ಲಿ ಶಾಲಾ ಮಕ್ಕಳಿಗೆ ಚಿಕನ್ ಬಿರಿಯಾನಿ ಸಿಗುವುದಂತೂ ಗ್ಯಾರಂಟಿ ಎಂದು ರಾಜ್ ಮೋಹನ್ ಭರವಸೆ ನೀಡಿದ್ದಾರೆ.

ಬೆಳೆಯುವ ಮಕ್ಕಳಿಗೆ ರಾಜಕೀಯ ಮಾಡದೆ ಪ್ರೋಟೀನ್ ಕೊಡಿ

ಕಳೆದ ಜುಲೈ ತಿಂಗಳಿನಲ್ಲೇ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾಪ ಮುಂಚೂಣಿಗೆ ಬಂದಿತ್ತು. ಶಾಲಾ ಊಟದ ಮೆನುವಿನಲ್ಲಿ ಮಾಂಸಾಹಾರ ಸೇರಿಸುವ ಚರ್ಚೆಯ ನಡುವೆ, ಸಚಿವ ರಾಜ್ ಮೋಹನ್ ಅವರೇ ಈ ಐಡಿಯಾವನ್ನು ಸಿಎಂ ವಿಜಯ್ ಅವರ ಮುಂದೆ ಇಟ್ಟಿದ್ದರು. ಬೆಳೆಯುವ ವಯಸ್ಸಿನ ಮಕ್ಕಳಿಗೆ ಸಾಕಷ್ಟು ಪ್ರೋಟೀನ್ ಅಗತ್ಯವಿದೆ. ಶಾಲಾ ಮಕ್ಕಳಿಗೆ ಚಿಕನ್ ಬಿರಿಯಾನಿ ಕೊಡುವುದನ್ನು ದಯವಿಟ್ಟು ಯಾರೂ ರಾಜಕೀಯ ದೃಷ್ಟಿಕೋನದಿಂದ ನೋಡಬೇಡಿ. ತಮಿಳುನಾಡಿನಲ್ಲಿ ಶಿಕ್ಷಣ ಕ್ರಾಂತಿ ಹಾಗೂ ಪೌಷ್ಟಿಕಾಂಶದ ಕ್ರಾಂತಿ ಜೊತೆಜೊತೆಯಾಗಿಯೇ ಸಾಗಿವೆ ಎಂದರು.

ಇದನ್ನೂ ಓದಿ:

ಸಸ್ಯಾಹಾರಿ ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ

ಮಾಂಸಾಹಾರ ಸೇವಿಸದ ಅಥವಾ ಸಸ್ಯಾಹಾರ ಇಷ್ಟಪಡುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಂದಿನಂತೆ ಸಸ್ಯಾಹಾರಿ ಊಟದ ವ್ಯವಸ್ಥೆ ಮುಂದುವರಿಯಲಿದೆ ಕೇವಲ ಮಾಂಸಾಹಾರ ಇಷ್ಟಪಡುವ ಮಕ್ಕಳಿಗೆ ಮಾತ್ರ ಚಿಕನ್ ಬಿರಿಯಾನಿ ಆಪ್ಷನ್ ಸಿಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಮಕ್ಕಳ ಹಾಜರಾತಿ ಹೆಚ್ಚಿಸಲು ಮತ್ತು ಅಪೌಷ್ಟಿಕತೆ ತಡೆಯಲು ತಮಿಳುನಾಡು ಸರ್ಕಾರ ಈಗಾಗಲೇ ಬೆಳಗ್ಗಿನ ಉಪಹಾರ ಯೋಜನೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಈಗ ಬಿಸಿಯೂಟಕ್ಕೆ ಬಿರಿಯಾನಿ ನೀಡಲು ಸಜ್ಜಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !