September 20, 2026
Sunday, September 20, 2026
spot_img

ಬಾಂಗ್ಲಾ ಬೌಲರ್‌ಗಳ ಬೆಂಡೆತ್ತಿ ಗೋಲ್ಡ್ ಮೆಡಲ್‌ ಮ್ಯಾಚ್‌ಗೆ ಟೀಂ ಇಂಡಿಯಾ ಗ್ರಾಂಡ್ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್‌ನ ನಿಶ್ಶಿನ್ ನಗರದ ಕ್ರಿಕೆಟ್ ಮೈದಾನದಲ್ಲಿ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್‌ನ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 114 ರನ್‌ಗಳ ಬೃಹತ್ ಅಂತರದಿಂದ ಧೂಳೀಪಟ ಮಾಡಿ, ಟೀಂ ಇಂಡಿಯಾ ಮಹಿಳೆಯರು ನೇರವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಪಂದ್ಯ ಶುರುವಾಗೋ ಮುನ್ನವೇ ಟಾಸ್ ಗೆದ್ದ ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್, “ನಾವು ಫಸ್ಟ್ ಬ್ಯಾಟಿಂಗ್ ಮಾಡ್ತೀವಿ” ಎಂದು ನಿರ್ಧಾರ ತಗೆದುಕೊಂಡರು. ನಾಯಕಿ ತಗೆದುಕೊಂಡ ನಿರ್ಧಾರ ಎಷ್ಟರಮಟ್ಟಿಗೆ ಸರಿಯಾಗಿತ್ತು ಅಂದ್ರೆ, ಕ್ರೀಸ್‌ಗೆ ಇಳಿದ ಶಫಾಲಿ ವರ್ಮಾ ಬಾಂಗ್ಲಾ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೂ ಬಾರಿಸಿ ಧೂಳೆಬ್ಬಿಸಿಬಿಟ್ಟರು.

ಶಫಾಲಿ ಅವರ ಬ್ಯಾಟಿಂಗ್ ನೋಡೋಕೆ ಎರಡು ಕಣ್ಣು ಸಾಲದಾಗಿತ್ತು. ಕೇವಲ 49 ಎಸೆತಗಳಲ್ಲಿ 9 ಭರ್ಜರಿ ಸಿಕ್ಸರ್ ಹಾಗೂ 3 ಫೋರ್‌ಗಳ ನೆರವಿನಿಂದ ಸಿಡಿಲಬ್ಬರದ ಸೆಂಚುರಿ ಬಾರಿಸಿದರು. ಇನ್ನೊಂದೆಡೆ ಸ್ಮೃತಿ ಮಂಧಾನ 37 ರನ್ ಹಾಗೂ ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ 40 ರನ್ ಬಾರಿಸಿ ಬೆಂಬಲ ನೀಡಿದರು. ಪರಿಣಾಮವಾಗಿ ಭಾರತ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 195 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.

196 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಬಾಂಗ್ಲಾದೇಶಕ್ಕೆ ಆರಂಭದಲ್ಲೇ ನಂದಿನಿ ಶರ್ಮಾ ತಮ್ಮ ಬೌಲಿಂಗ್ ಮೂಲಕ ಶಾಕ್ ನೀಡಿದರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಕ್ರಾಂತಿ ಗೌಡ್ ಹಾಗೂ ಶ್ರೀಚರಣಿ ಬೆಂಕಿ ಬೌಲಿಂಗ್ ಮಾಡಿ ಬಾಂಗ್ಲಾ ಬ್ಯಾಟರ್‌ಗಳನ್ನು ಕ್ರೀಸ್‌ನಲ್ಲಿ ನಿಲ್ಲದಂತೆ ಮಾಡಿದರು. ಕೇವಲ 49 ರನ್ ಗಳಿಸುವಷ್ಟರಲ್ಲೇ ಬಾಂಗ್ಲಾದೇಶ ತನ್ನ 5 ಮುಖ್ಯ ವಿಕೆಟ್‌ಗಳನ್ನು ಕಳೆದುಕೊಂಡು ಪರದಾಡಿತು. ಅಂತಿಮವಾಗಿ ಬಾಂಗ್ಲಾದೇಶ ತಂಡ 15.4 ಓವರ್‌ಗಳಲ್ಲಿ ಕೇವಲ 81 ರನ್‌ಗಳಿಗೆ ಆಲ್ ಔಟ್ ಆಯ್ತು.

ಈ ಅದ್ಭುತ 114 ರನ್‌ಗಳ ಗೆಲುವಿನೊಂದಿಗೆ ಭಾರತ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಮಂಗಳವಾರ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‌ನಲ್ಲಿ ತೋರಿಸಿದ ಇದೇ ಅಬ್ಬರವನ್ನು ಫೈನಲ್‌ನಲ್ಲೂ ಮುಂದುವರಿಸಿ ನಮ್ಮ ಹುಡುಗಿಯರು ಚಿನ್ನದ ಪದಕ ಗೆದ್ದು ಬರಲಿ ಎಂಬುದೇ ಭಾರತೀಯರ ಹಾರೈಕೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !