ಹೊಸದಿಗಂತ ವರದಿ ಉಳ್ಳಾಲ :
ಅಮೃತ್ 2.0 ಕುಡಿಯುವ ನೀರಿನ ಕಾಮಗಾರಿಯಲ್ಲಿನ ಅವ್ಯವಸ್ಥೆ, ಬಲ್ಯದಲ್ಲಿ ಮಲತ್ಯಾಜ್ಯ ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳ (ಎಸ್ಟಿಪಿ ಮತ್ತು ಎಫ್ಎಸ್ಟಿಪಿ) ನಿರ್ಮಾಣಕ್ಕೆ ವಿರೋಧ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಕೋಟೆಕಾರು ಪಟ್ಟಣ ಪಂಚಾಯತ್ನಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.
ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಶೋಭಲಕ್ಷ್ಮಿ ಅವರು ಅಮೃತ್ 2.0 ಕುಡಿಯುವ ನೀರು ಸರಬರಾಜು ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ನೀಡಿದರು. ಜಲಾಲ್ಬಾಗ್, ಪನೀರ್ ಮತ್ತು ಮಡ್ಯಾರ್ನಲ್ಲಿನ ನೀರಿನ ಟ್ಯಾಂಕ್ಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಬೀರಿಯಲ್ಲಿ ಟ್ಯಾಂಕ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಕುಸಾಲ್ ನಗರ, ಮಡ್ಯಾರ್ ಟ್ಯಾಂಕ್ನಲ್ಲಿ ಆಗಾಗ್ಗೆ ಓವರ್ಲೋಡ್ನಿಂದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಟ್ಯಾಂಕ್ನಿಂದ ಸುಮಾರು 20 ನಿಮಿಷಗಳ ಕಾಲ ನೀರು ಹರಿದು ಹೋದರೆ ಎಷ್ಟು ಪ್ರಮಾಣದ ನೀರು ಪೋಲಾಗಬಹುದು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶೋಭಲಕ್ಷ್ಮಿ, ವಿದ್ಯುತ್ ವೋಲ್ಟೇಜ್ ಸಮಸ್ಯೆಯಿಂದಾಗಿ ಟ್ಯಾಂಕ್ನ ಸೆನ್ಸರ್ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಇದಕ್ಕೆ ಕಾರಣವಾಗಿದೆ. ಪಂಪ್ ಆಪರೇಟರ್ಗಳಿಗೆ ತಕ್ಷಣ ಮಾಹಿತಿ ನೀಡಿದರೆ ಸಮಸ್ಯೆ ಪರಿಹರಿಸಬಹುದು. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳಿದ್ದರೂ ವಿಡಿಯೋ ಸಹಿತ ನೇರವಾಗಿ ತಮ್ಮ ಗಮನಕ್ಕೆ ತರುವಂತೆ ಮನವಿ ಮಾಡಿದರು.
ನೀರಿನಲ್ಲಿ ಋಣಾತ್ಮಕ ಅಂಶಗಳಿರುವ ಬಗ್ಗೆ ಪ್ರಯೋಗಾಲಯದ ವರದಿಯಲ್ಲಿ ಉಲ್ಲೇಖವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಈ ಕುರಿತು ಮುಖ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿ ವರದಿ ನೀಡುವಂತೆ ಪಕ್ಷೇತರ ಸದಸ್ಯ ಹರೀಶ್ ರಾವ್ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶೋಭಲಕ್ಷ್ಮಿ, ಕುಡಿಯುವ ನೀರನ್ನು ಪರಿಶೀಲಿಸಿದ ಬಳಿಕವೇ ಸರಬರಾಜು ಮಾಡಲಾಗುತ್ತದೆ. ಸಾರ್ವಜನಿಕರ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಮತ್ತೊಮ್ಮೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ಬೀರಿ-ದೇರಳಕಟ್ಟೆ ಲೋಕೋಪಯೋಗಿ ಇಲಾಖೆ ರಸ್ತೆಯ ಪಕ್ಕದಲ್ಲಿ ಅಳವಡಿಸಿರುವ ಬೃಹತ್ ಪೈಪ್ಲೈನ್ ರಸ್ತೆ ಅಗಲೀಕರಣ ಕಾಮಗಾರಿಯಿಂದ ಹಾನಿಗೊಳಗಾಗುವ ಸಾಧ್ಯತೆಯಿದೆ. ಬೇಸಿಗೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆದರೆ ನೀರಿನ ಸಮಸ್ಯೆಯೂ ಎದುರಾಗಬಹುದು. ಈ ಬಗ್ಗೆ ಕೈಗೊಂಡಿರುವ ಕ್ರಮಗಳೇನು ಎಂದು ಕೌನ್ಸಿಲರ್ ಸುಜಿತ್ ಮಾಡೂರು ಪ್ರಶ್ನಿಸಿದರು. ಇದಕ್ಕೆ ಧೀರಜ್ ಕುಸಾಲ್ ನಗರ ಕೂಡ ಧ್ವನಿಗೂಡಿಸಿದರು. ಈ ಕುರಿತು ಪಿಡಬ್ಲ್ಯೂಡಿ ಅಧಿಕಾರಿಗಳು ವರದಿ ನೀಡಲಿ. ವರದಿ ಬಂದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶೋಭಲಕ್ಷ್ಮಿ ಉತ್ತರಿಸಿದರು.
ಬಲ್ಯದಲ್ಲಿ ಎಸ್ಟಿಪಿ, ಎಫ್ಎಸ್ಟಿಪಿ ಘಟಕ ನಿರ್ಮಾಣಕ್ಕೆ ವಿರೋಧ
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಬಲ್ಯ ಪ್ರದೇಶದಲ್ಲಿ 1 ಎಕರೆ 89 ಸೆಂಟ್ಸ್ ಜಾಗ ಗುರುತಿಸಿ ಮಲತ್ಯಾಜ್ಯ ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳನ್ನು (ಎಸ್ಟಿಪಿ ಹಾಗೂ ಎಫ್ಎಸ್ಟಿಪಿ) ಸ್ಥಾಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಜಾಗವು ಕೋಟೆಕಾರು ಪಟ್ಟಣ ಪಂಚಾಯತ್ ಮತ್ತು ಸೋಮೇಶ್ವರ ಪುರಸಭೆಯ ಗಡಿ ಪ್ರದೇಶದಲ್ಲಿದ್ದು, ಪಟ್ಟಣ ಪಂಚಾಯತ್ನ 3 ಮತ್ತು 4ನೇ ವಾರ್ಡ್ಗಳಿಗೆ ಹೊಂದಿಕೊಂಡಿದೆ. ಘಟಕಗಳ ಸ್ಥಾಪನೆಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಇಲ್ಲಿ ಘಟಕಗಳನ್ನು ನಿರ್ಮಿಸಲು ಅವಕಾಶ ನೀಡಬಾರದೆಂದು ಈಗಾಗಲೇ ದೂರು ನೀಡಿದ್ದೇವೆ. ಆದರೂ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಕೌನ್ಸಿಲರ್ ಸುಜಿತ್ ಆರೋಪಿಸಿದರು.
ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣದ ಆದೇಶವನ್ನು ಮರುಪರಿಶೀಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಗಿದೆ. ಹೀಗಿರುವಾಗ ಮತ್ತೆ ಮತ್ತೆ ಇದೇ ವಿಚಾರವಾಗಿ ಚರ್ಚೆ ನಡೆಸುತ್ತಿರುವುದೇಕೆ ಎಂದು ಅಧ್ಯಕ್ಷೆ ದಿವ್ಯಾ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ನಾಲ್ಕನೇ ವಾರ್ಡ್ ಸದಸ್ಯ ಕಿರಣ್ ಕುಮಾರ್, ಅಧ್ಯಕ್ಷರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಘಟಕ ಸ್ಥಾಪನೆ ಕುರಿತು ಸ್ಥಳೀಯ ನಿವಾಸಿಗಳ ಅಭಿಪ್ರಾಯವನ್ನೂ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.
ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಪ್ರವೀಣ್ ಬಗಂಬಿಲ ಹಾಗೂ ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.



