September 21, 2026
Monday, September 21, 2026
spot_img

ಕಾಂಗ್ರೆಸಿಗರು ಎರಡು ಚರಣ, ಬಿಜೆಪಿಗರು ಸಂಪೂರ್ಣ ಹಾಡು: ವಿಧಾನಮಂಡಲ ವಿಶೇಷ ಅಧಿವೇಶನದಲ್ಲಿ ʼವಂದೇ ಮಾತರಂʼ ಗದ್ದಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಧಾನ ಮಂಡಲ ವಿಶೇಷ ಅಧಿವೇಶನದ ಮೊದಲ ದಿನವೇ ವಂದೇ ಮಾತರಂ ವಿಷಯವಾಗಿ ವಿಧಾನ ಪರಿಷತ್‌ ರಣರಂಗವಾಗಿ ಮಾರ್ಪಾಡಾಗಿದೆ. ಕಾಂಗ್ರೆಸಿಗರು ವಂದೇ ಮಾತರಂನ ಎರಡು ಚರಣ ಮಾತ್ರ ಹಾಡಿ ನಿಲ್ಲಿಸಿದರೆ, ಬಿಜೆಪಿಗರು ಸಂಪೂರ್ಣ ಗೀತೆಯನ್ನು ಹಾಡಿದ್ದಾರೆ.

ಎರಡು ಚರಣ ಹಾಡಿ ಕೂರಲು ನೋಡಿದ ಕಾಂಗ್ರೆಸಿಗರಿಗೆ ವಿಪಕ್ಷಗಳು ಶಾಕ್‌ ನೀಡಿವೆ. ಇಡೀ ಗೀತೆಯನ್ನು ಪೂರ್ಣಗೊಳಿಸಿದ ನಂತರವೇ ಅವರು ಕುಳಿತಿದ್ದಾರೆ. ತಕ್ಷಣವೇ ಸಭಾಧ್ಯಕ್ಷರು ಸಂವಿಧಾನ ಪೀಠಿಕೆ ಬೋಧನೆ ಮಾಡಿದ್ದಾರೆ.

ನಮ್ಮ ಹೆಮ್ಮೆಯ ಗೀತೆಯಾದ ವಂದೇ ಮಾತರಂನ್ನು ಸಂಪೂರ್ಣವಾಗಿ ಹೇಳಲು ನಿರಾಕರಿಸುತ್ತಿರುವ ಕಾಂಗ್ರೆಸ್‌ಗೆ ಧಿಕ್ಕಾರ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದ್ದಾರೆ. ಸಂವಿಧಾನ ಪೀಠಿಕೆ ಓದದ ಬಿಜೆಪಿಗರಿಗೆ ಧಿಕ್ಕಾರ ಎಂದು ಕಾಂಗ್ರೆಸ್‌ ಪ್ರತಿಘೋಷಣೆ ಕೂಗಿದೆ. ಈವರೆಗೂ ಪರಿಷತ್‌ನಲ್ಲಿ ಸಂಪೂರ್ಣ ವಂದೇ ಮಾತರಂ ಹಾಡಲಾಗುತ್ತಿತ್ತು. ಈಗೇಕೆ ಇದನ್ನು ಎರಡು ಪ್ಯಾರಾಗೆ ಸೀಮಿತ ಮಾಡಿದ್ರಿ? ಎಂದು ಬಿಜೆಪಿಗರು ಪ್ರಶ್ನಿಸಿದಾಗ ನಮ್ಮ ಸರ್ಕಾರ ಎರಡು ಪ್ಯಾರಾ ಹಾಡೋಕೆ ನಿರ್ಧಾರ ಮಾಡಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಉತ್ತರಿಸಿದ್ದಾರೆ. ನಮ್ಮ ಪ್ರಶ್ನೆಗೆ ಉತ್ತರ ಕೊಡೋದಕ್ಕೆ ನೀವ್ಯಾರು ಎಂದು ಬಿಜೆಪಿಗರು ಮರುಉತ್ತರ ನೀಡಿದ್ದಾರೆ.

ಸಭಾಪತಿಗಳ ಕೈಯಲ್ಲಿ ಏನೂ ಇಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು ಬಿಜೆಪಿಗರನ್ನು ಕೆರಳಿಸಿದೆ. ಇಂದು ಸಂವಿಧಾನದ ಪೀಠ, ಒಂದು ಸರ್ಕಾರಕ್ಕೆ ಸಂಬಂಧಿಸಿದ ಪೀಠ ಅಲ್ಲ. ಏನ್ರೀ ನಾವು ಹೇಳ್ತಿರೋದು ತಪ್ಪಾ ಎಂದು ಸಭಾಪತಿಗಳಿಗೆ ಪ್ರಶ್ನಿಸಲಾಗಿದೆ. ಈ ಗದ್ದಲದಲ್ಲಿಯೇ ದಿನ ವೇಸ್ಟ್‌ ಆಗೋದು ಬೇಡ ಕಸ್ತೂರಿ ರಂಗನ್‌ ವರದಿ ಬಗ್ಗೆ ಚರ್ಚೆ ಮಾಡಿ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ ಹೇಳಿದ್ದಾರೆ. ಆದರೂ ಕ್ಯಾರೆ ಎನ್ನದ ಎಲ್ಲರೂ ಗದ್ದಲ ಮುಂದುವರಿಸಿದ್ದಾರೆ. ತೀವ್ರ ಗದ್ದಲದ ಹಿನ್ನೆಲೆ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !